ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಮಣ್ಣಿನ ಆರೋಗ್ಯ ಹೆಚ್ಚಿಸುವ ಹಾಗೂ ಉತ್ತಮ ಇಳುವರಿಗೆ ಕಾರಣವಾಗುವ ನ್ಯಾನೋ ಗೊಬ್ಬರವನ್ನು ರೈತರಿಗೆ ಶೀಘ್ರದಲ್ಲೇ ಲಭ್ಯವಾಗುವಂತೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ನ್ಯಾನೋ ಗೊಬ್ಬರದ ಪ್ರಾಯೋಗಿಕ ಪರೀಕ್ಷೆಯನ್ನು ಗುಜರಾತಿನಲ್ಲಿ ಈಗಾಗಲೇ ಮಾಡಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ. ಗುಜರಾತಿನ 13000 ರೈತರಿಗೆ ಇದಕ್ಕಾಗಿ ನ್ಯಾನೋ ಗೊಬ್ಬರವನ್ನು ಉಚಿತವಾಗಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ರಾಸಾಯನಿಕ ಗೊಬ್ಬರಕ್ಕಿಂತ ನ್ಯಾನೋ ಗೊಬ್ಬರ ಬಳಕೆಯಿಂದ ಶೇಕಡ 15 ರಷ್ಟು ಹೆಚ್ಚುವರಿ ಇಳುವರಿ ಬರುತ್ತದೆ ಎಂದು ಹೇಳಿದ ಸದಾನಂದಗೌಡರು, ಇದರಿಂದ ಭೂಮಿಯ ಗುಣಮಟ್ಟ ಸಹ ಹೆಚ್ಚಾಗಲಿದೆ. ಇಲ್ಲದೆ ಇತರೆ ಗೊಬ್ಬರಕ್ಕೆ ಹೋಲಿಸಿದರೆ ಖರ್ಚು ಸಹ ಕಡಿಮೆ ಎಂದು ತಿಳಿಸಿದರು.