ಬೆಂಗಳೂರು: ರಾಜ್ಯದಲ್ಲಿ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ದಿನದ 24 ಗಂಟೆಗಳೂ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಮುಂದಿನ ಮೂರು ವರ್ಷದವರೆಗೆ ಎಲ್ಲಾ ದಿನಗಳಲ್ಲಿ 24X7 ಅಂಗಡಿ ವಾಣಿಜ್ಯ ಸಂಸ್ಥೆಗಳನ್ನು ತೆರೆಯಬಹುದಾಗಿದೆ.
ಇದಕ್ಕಾಗಿ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ 1961 ಮತ್ತು ಅಧಿಸೂಚನೆಗಳನ್ನು ಮಾರ್ಪಾಡು ಮಾಡಲಾಗಿದೆ. ಶನಿವಾರ ರಾಜ್ಯ ಸರ್ಕಾರ ಈ ಕುರಿತಾಗಿ ಅಧಿಕೃತ ಸೂಚನೆ ನೀಡಿದೆ. ಷರತುತ್ತಗಳೊಂದಿಗೆ ದಿನದ 24 ಗಂಟೆಗಳ ಕಾಲ ಅಂಗಡಿ, ವಾಣಿಜ್ಯ ಸಂಸ್ಥೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಪ್ರತಿ ಉದ್ಯೋಗಿಗೆ ವಾರದಲ್ಲಿ ಒಂದು ದಿನ ರಜೆ ನೀಡಬೇಕು. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಪ್ರತಿ ಉದ್ಯೋಗಿಯ ವಿವರಗಳನ್ನು ಅಂಗಡಿ ಅಥವಾ ವಾಣಿಜ್ಯ ಸಂಸ್ಥೆಯಲ್ಲಿ ಎದ್ದು ಕಾಣುವ ಸ್ಥಳದಲ್ಲಿ ಪ್ರದರ್ಶಿಸಬೇಕು. ರಜೆಯಲ್ಲಿರುವ, ಕೆಲಸ ನಿರ್ವಹಿಸುವ ನೌಕರರ ಮಾಹಿತಿಯನ್ನು ಪ್ರದರ್ಶಿಸಬೇಕು.
ವೇತನ ಕಾಯ್ದೆ 1963 ರ ಪ್ರಕಾರ ನೌಕರರ ವೇತನವನ್ನು ಅವರ ಉಳಿತಾಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಿದೆ. 8 ಗಂಟೆಗಿಂತ ಹೆಚ್ಚಿನ ಅವಧಿ ಅಥವಾ ವಾರದಲ್ಲಿ 48 ಗಂಟೆಗಿಂತ ಹೆಚ್ಚು ಕಾಲ ಕೆಲಸ ಮಾಡಲು ಯಾವುದೇ ಉದ್ಯೋಗಿಗೆ ಅನುಮತಿಸಬಾರದು. ಮೂರು ತಿಂಗಳ ನಿರಂತರ ಅವಧಿಯಲ್ಲಿ ಯಾವುದೇ ದಿನದಲ್ಲಿ 10 ಗಂಟೆ ಅಥವಾ ವಾರದಲ್ಲಿ 50 ಗಂಟೆ ಮೀರಬಾರದು.
ಮಹಿಳಾ ಉದ್ಯೋಗಿಗಳು 8 ಗಂಟೆ ಮೀರಿ ಕೆಲಸ ಮಾಡಲು ಅನುಮತಿಸುವಂತಿಲ್ಲ. ಅವರ ಲಿಖಿತ ಒಪ್ಪಿಗೆಯ ನಂತರ ಸುರಕ್ಷತೆಗೆ ಮತ್ತು ರಕ್ಷಣೆಗೆ ಆದ್ಯತೆ ನೀಡಿ ರಾತ್ರಿ 8 ರಿಂದ ಬೆಳಗ್ಗೆ 6 ಗಂಟೆಯವರೆಗೆ ಕೆಲಸ ಮಾಡಲು ಅವಕಾಶ ನೀಡಬಹುದು. ಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಉದ್ಯೋಗಿಗಳಿಗೆ ಸಾರಿಗೆ ವ್ಯವಸ್ಥೆ ಒದಗಿಸಬೇಕು.
ನೌಕರರಿಗೆ ರೆಸ್ಟ್ ರೂಮ್, ವಾಶ್ರೂಮ್, ಸೇಫ್ಟಿ ಲಾಕರ್ಸ್ ಮೊದಲಾದ ಮೂಲಸೌಕರ್ಯ ಒದಗಿಸಬೇಕು. ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡುವ ಪ್ರತಿಯೊಬ್ಬ ಉದ್ಯೋಗದಾತರು ಲೈಂಗಿಕ ಕಿರುಕುಳದ ವಿರುದ್ಧ ಆಂತರಿಕ ದೂರುಗಳ ಸಮಿತಿಯನ್ನು ರಚಿಸಬೇಕು ಎಂಬುದು ಸೇರಿದಂತೆ ಹಲವು ನಿಯಮಗಳೊಂದಿಗೆ 24X7 ಅಂಗಡಿ, ವಾಣಿಜ್ಯ ಸಂಸ್ಥೆ ತೆರೆಯಲು ಅನುಮತಿ ನೀಡಲಾಗಿದೆ.