ಬೆಂಗಳೂರು: ಲೈಂಗಿಕ ರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಲ್ಲಿ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದು ಮಹಿಳೆಯರ ಖಾಸಗಿ ಫೋಟೋ, ವಿಚಾರವನ್ನು ಪಡೆಯುತ್ತಿದ್ದ ಸೈಬರ್ ವಂಚಕರ ಕೃತ್ಯ ಬೆಳಕಿಗೆ ಬಂದಿದೆ.
ಸೈಬರ್ ಕಳ್ಳರು ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ನೂರಾರು ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಪದ್ಮಿನಿ ಪ್ರಸಾದ್ ಅವರೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರೆ ಎಂದು ಭಾವಿಸಿದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು.
ಜೊತೆಗೆ ಖಾಸಗಿ ಫೋಟೋ, ವಿಡಿಯೋ ಗೌಪ್ಯ ವಿಚಾರಗಳನ್ನು ವಂಚಕರು ಪಡೆದುಕೊಂಡಿದ್ದಾರೆ. ಫೇಸ್ಬುಕ್ ಮೆಸೆಂಜರ್ ನಲ್ಲಿ ಮಾತ್ರ ವಂಚಕರು ಸಂಪರ್ಕದಲ್ಲಿದ್ದು, ಫೋನ್ ನಂಬರ್ ನೀಡಿರಲಿಲ್ಲ. ಕೊರೋನಾ ಕಾರಣದಿಂದ ಆಸ್ಪತ್ರೆಗೆ ಬರುವಂತಿಲ್ಲ. ಫೇಸ್ಬುಕ್ ಮೆಸೇಂಜರ್ ನಲ್ಲಿ ಮಾತ್ರ ಸಮಸ್ಯೆ ಹೇಳಿಕೊಳ್ಳಿ ಎಂದು ತಿಳಿಸಿದ್ದರೆನ್ನಲಾಗಿದೆ.
ಮಹಿಳೆಯೊಬ್ಬರಿಗೆ ಖಾಸಗಿ ವಿಡಿಯೋ ಮಾಡಿ ಕಳುಹಿಸುವಂತೆ ತಿಳಿಸಲಾಗಿದ್ದು, ಅನುಮಾನಗೊಂಡ ಅವರು ಪದ್ಮಿನಿ ಪ್ರಸಾದ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಇದುವರೆಗೂ ನೂರಾರು ಮಹಿಳೆಯರ ವೈಯಕ್ತಿಕ ಫೋಟೋ, ವಿಡಿಯೋ, ಖಾಸಗಿ ಮಾಹಿತಿ ಪಡೆದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪದ್ಮಿನಿ ಪ್ರಸಾದ್ ಅವರು ಸೈಬರ್ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.