ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಕೊರೆಯುವ ಚಳಿಯಲ್ಲೂ ಪ್ರತಿಭಟನೆ ಮುಂದುವರಿಸಿದ್ದಾರೆ. ಶುಕ್ರವಾರ ರೈತ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದ್ದು, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಕೇಂದ್ರ ಸರ್ಕಾರ ಬೇಡಿಕೆಗೆ ಒಪ್ಪದಿದ್ದರೆ ಜನವರಿ 4 ರಿಂದ ಪೆಟ್ರೋಲ್ ಬಂಕ್ ಬಂದ್ ಮಾಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ. ದೆಹಲಿಯಲ್ಲಿಯಾ ಸಿಂಘು, ಘಾಜಿಪುರ, ಟೆಕ್ರಿ ಗಡಿಭಾಗದಲ್ಲಿ ಲಕ್ಷಾಂತರ ರೈತರು ನವೆಂಬರ್ 26 ರಿಂದ ನಿರಂತರವಾಗಿ ಪ್ರತಿಭಟನೆ ಕೈಗೊಂಡಿದ್ದಾರೆ.
ದೆಹಲಿಯಲ್ಲಿ 1.1 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಕಳೆದ 15 ವರ್ಷದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. 37 ದಿನಗಳಿಂದ ಹೋರಾಟ ಕೈಗೊಂಡಿರುವ ರೈತರು ತೀವ್ರತರವಾದ ಚಳಿಯನ್ನು ಲೆಕ್ಕಿಸದೇ ಹೋರಾಟ ಮುಂದುವರಿಸಿದ್ದಾರೆ.
ಸರ್ಕಾರದೊಂದಿಗೆ 7 ಸಲ ಮಾತುಕತೆ ನಡೆದಿದ್ದರೂ ಫಲಪ್ರದವಾಗಿಲ್ಲ. ಈ ಹಿನ್ನೆಲೆಯಲ್ಲಿ 41 ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಜನವರಿ 4 ರಿಂದ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದೆ ಎಂದು ಹೇಳಲಾಗಿದೆ.