ಹೊಸ ವರ್ಷದ ಹಿಂದಿನ ದಿನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ 15 ವರ್ಷದ ಇತಿಹಾಸದಲ್ಲೇ ಅತಿ ಕಡಿಮೆ ಮಟ್ಟಕ್ಕೆ ಕುಸಿದಿದೆ. ಸಫ್ದರ್ಜಂಗ್ ವೀಕ್ಷಣಾಲಯದಲ್ಲಿ ತಾಪಮಾನ 1.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಜನವರಿ 08,2006ರಂದು ದೆಹಲಿಯಲ್ಲಿ ಕನಿಷ್ಟ 0.2 ಡಿಗ್ರಿ ತಾಪಮಾನ ದಾಖಲಾಗಿತ್ತು.
ಕಳೆದ ವರ್ಷ ಜನವರಿಯಲ್ಲಿ 2.4 ಡಿಗ್ರಿ ತಾಪಮಾನ ದೆಹಲಿಯಲ್ಲಿ ದಾಖಲಾಗಿತ್ತು. ಇದು ಕಳೆದ ವರ್ಷ ದಾಖಲಾದ ಅತ್ಯಂತ ಕಡಿಮೆ ತಾಪಮಾನ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ಐಎಂಡಿ ಪ್ರಾದೇಶಿಕ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀ ವಾತ್ಸವ್, ಸಫ್ದರ್ಜಂಗ್ ಹಾಗೂ ಪಾಲಂನಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ದಟ್ಟ ಮಂಜು ಆವರಿಸಿತ್ತು. ಜನವರಿ 2ರಿಂದ ಜನವರಿ 6 ರವರೆಗೆ ತಾಪಮಾನ ಏರಿಕೆ ಕಾಣಲಿದೆ ಎಂದು ಹೇಳಿದ್ರು.
ಇಂದು ಕನಿಷ್ಟ ತಾಪಮಾನ ಅಂದರೆ 1.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ 15 ವರ್ಷಗಳ ಇತಿಹಾಸದಲ್ಲೇ ದಾಖಲಾದ ಅತ್ಯಂತ ಕಡಿಮೆ ತಾಪಮಾನವಾಗಿದೆ. 2006ರಲ್ಲಿ ದೆಹಲಿಯಲ್ಲಿ 0.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು, ನಾಳೆಯಿಂದ ತಾಪಮಾನ ಏರಿಕೆಯಾಗಲಿದೆ ಎಂದು ಶ್ರೀವಾತ್ಸವ್ ಹೇಳಿದ್ರು.