ಬೆಂಗಳೂರು: ಕೊರೊನಾ ಆತಂಕದ ನಡುವೆಯೇ ರಾಜ್ಯಾದ್ಯಂತ ಇಂದಿನಿಂದ ಶಾಲಾ-ಕಾಲೇಜು, ವಿದ್ಯಾಗಮ ಆರಂಭಗೊಂಡಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಆನ್ ಲೈನ್ ಕ್ಲಾಸ್ ಗಳಿಗಿಂತ ಮಕ್ಕಳು ಶಾಲೆಗೆ ಬಂದು ಕಲಿತರೆ ಪರಿಪೂರ್ಣರಾಗುತ್ತಾರೆ. ಹಾಗಂತ ಶಾಲೆಗೆ ಬರುವಂತೆ ಒತ್ತಾಯ ಮಾಡಲ್ಲ. ಒಟ್ಟಾರೆ ಶಾಲೆಗಳು ಪುನರಾರಂಭವಾಗಿವೆ ಎಂದರು.
ಎಲ್ಲಾ ಶಾಲೆಗಳೂ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದೆ. ಇದು ಶಾಲೆಗಳಲ್ಲ, ಸುರಕ್ಷತಾ ಕೇಂದ್ರಗಳು. ಪೋಷಕರು ಧೈರ್ಯವಾಗಿ ಮಕ್ಕಳನ್ನು ಶಾಲೆಗಳಿಗೆ ಕಳಿಸಬಹುದು. ಹೊಸ ವರ್ಷ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿಲ್ಲ. ಸೋಮವಾರದಿಂದ ಬರಬಹುದು ಎಂದು ಹೇಳಿದರು.
ಪೋಷಕರಲ್ಲಿ ಆತಂಕವಿದೆ. ಆದರೆ ಆತಂಕಪಡುವ ಅಗತ್ಯವಿಲ್ಲ. ಹೊಸ ಪ್ರಭೇದದ ಕೊರೊನಾ ಕೂಡ ಹಳೆ ಕೊರೊನಾದಂತೆಯೇ ಇದೆ. ಆದರೆ ವೇಗವಾಗಿ ಹರಡುತ್ತೆ ಅಷ್ಟೇ. ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.