ಮೂರು ದಶಕಗಳ ಹಿಂದೆ ಭಾರತಕ್ಕೆ ಆಗಮಿಸಿ ಇಲ್ಲೇ ವಾಸಿಸುತ್ತಿರುವ ಪಾಕಿಸ್ತಾನೀ ಮಹಿಳೆಯೊಬ್ಬರನ್ನು ಉತ್ತರ ಪ್ರದೇಶದಲ್ಲಿ ಗ್ರಾಮವೊಂದರ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು.
ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಲೆಂದು ಇಲ್ಲಿನ ಎಟಾ ಜಿಲ್ಲೆಯ ಗ್ರಾಮವೊಂದಕ್ಕೆ ಆಗಮಿಸಿದ್ದ ಪಾಕಿಸ್ತಾನದ ಕರಾಚಿ ನಿವಾಸಿ ಬಾನೋ ಬೇಗಮ್, 35 ವರ್ಷಗಳಿಂದಲೂ ಇಲ್ಲೇ ಇದ್ದಾರೆ. ವೀಸಾ ಅವಧಿ ವಿಸ್ತರಣೆಯೊಂದಿಗೆ ಹೆಚ್ಚಿನ ಕಾಲಾವಾಕಾಶವನ್ನು ಭಾರತದಲ್ಲಿ ಕಳೆಯಲು ಅವಕಾಶ ಪಡೆದ ಬಾನೋ ಇಲ್ಲಿಯ ವ್ಯಕ್ತಿಯನ್ನೆ ಮದುವೆಯಾಗಿದ್ದಾರೆ.
ಭಾರತೀಯ ಪೌರತ್ವ ಇನ್ನೂ ಸಿಕ್ಕಿರದ 65 ವರ್ಷ ಬಾನೋ ಬಳಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳೆಲ್ಲಾ ಇವೆ.
2015ರಲ್ಲಿ ಜಿಲ್ಲೆಯ ಗ್ವಾಡಾವ್ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಫರ್ಧಿಸಿದ ಬಾನೋ, ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು. ಗ್ರಾಮದ ಮುಖ್ಯಸ್ಥೆ ಶಹನಾಜ್ ಬೇಗಮ್ ಇದೇ ಜನವರಿಯಲ್ಲಿ ಮೃತಪಟ್ಟ ಬಳಿಕ ಬಾನೋರನ್ನು ಮಧ್ಯಂತರ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಲಾಗಿತ್ತು.
ಆದರೆ ಈಕೆ ಪಾಕ್ ಮೂಲದ ಮಹಿಳೆಯಾಗಿದ್ದು, ಭಾರತ ಪೌರತ್ವ ಪಡೆದಿಲ್ಲ ಎಂದು ಗ್ರಾಮದ ಪ್ರಜೆಯೊಬ್ಬರು ದೂರು ಕೊಟ್ಟ ಬಳಿಕ ಬಾನೋ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಲು ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಭಾರತೀಯ ಪೌರತ್ವ ಕೋರಿ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರೂ ಸಹ ಬಾನೋಗೆ ಪೌರತ್ವ ಸಿಕ್ಕಿರಲಿಲ್ಲ. ಈಕೆಗೆ ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳು ಹೇಗೆ ಸಿಕ್ಕಿವೆ ಎಂದು ತನಿಖೆ ಮಾಡಲಾಗುತ್ತಿದೆ.