ತಿರುವನಂತಪುರಂ: ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ಹೋರಾಟ ಕೈಗೊಂಡಿದ್ದಾರೆ. ಈ ಹೋರಾಟವನ್ನು ಬೆಂಬಲಿಸಿ ಕೇರಳ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಲಾಗಿದ್ದು, ಬಿಜೆಪಿ ಶಾಸಕ ಕೂಡ ಸರ್ಕಾರದ ಗೊತ್ತುವಳಿಗೆ ಬೆಂಬಲ ಸೂಚಿಸಿದ್ದಾರೆ.
ಆಡಳಿತಾರೂಢ ಎಲ್.ಡಿ.ಎಫ್. ಮತ್ತು ವಿರೋಧ ಪಕ್ಷ ಯುಡಿಎಫ್ ಸದಸ್ಯರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ. ಇದಕ್ಕೆ ಕೇರಳ ಬಿಜೆಪಿಯ ಏಕೈಕ ಶಾಸಕ ರಾಜಗೋಪಾಲ್ ಅವರು ಕೂಡ ಬೆಂಬಲ ನೀಡಿದ್ದಾರೆ.
ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಗೋಪಾಲ್ ಅವರು, ರೈತರಿಗೆ ವಿರುದ್ಧವಾಗಿರುವ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕು ಎನ್ನುವ ಸರ್ಕಾರದ ಗೊತ್ತುವಳಿಯನ್ನು ಬೆಂಬಲಿಸುತ್ತೇನೆ. ಗೊತ್ತುವಳಿಯ ಕೆಲವು ಅಂಶಗಳಿಗೆ ನಾನು ವಿರುದ್ಧವಾಗಿದ್ದರೂ ಬೆಂಬಲ ನೀಡಿರುವುದು ಪ್ರಜಾಸತ್ತಾತ್ಮಕ ಮನೋಭಾವದ ಸಂಕೇತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಮ್ಮತದ ಅಭಿಪ್ರಾಯದ ಅನುಸಾರ ಹೋಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.