ಮುಂಬೈ: ಮುಂಬೈ ಮಹಾನಗರದ ಅಕ್ಷ ಬೀಚ್ ಸಮೀಪ ಮೃತದೇಹ ದೊರೆತ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮೃತಪಟ್ಟ ಮಹಿಳೆಯ ಮಾವನೇ ಸಹಚರರೊಂದಿಗೆ ಸೇರಿ ಕೊಲೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಪಂಕಜ್ ಮತ್ತು ನಂದಿನಿ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇವರ ಮದುವೆಗೆ ಪಂಕಜ್ ತಂದೆ ಕಮಲ್ ಒಪ್ಪಿರಲಿಲ್ಲ. ಮದುವೆಯ ನಂತರವೂ ಆತ ಸೊಸೆಯ ಬಗ್ಗೆ ಕಿಡಿಕಾರುತ್ತಿದ್ದ. ಆಕೆಯ ನಡತೆ ಬಗ್ಗೆ ಅನುಮಾನಗೊಂಡಿದ್ದ, ಡಿಸೆಂಬರ್ 9 ರಂದು ಮಗ ಕೆಲಸಕ್ಕೆ ಹೋಗುತ್ತಿದ್ದಂತೆ ಮನೆಯಲ್ಲಿ ಮಲಗಿದ್ದ ಸೊಸೆಯನ್ನು ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿದ ಕಮಲ್ ಇಬ್ಬರು ಸಹಚರರ ನೆರವಿನಿಂದ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ನಾಲೆಗೆ ಎಸೆದಿದ್ದಾನೆ.
ನೀರಿನಲ್ಲಿ ತೇಲಿಕೊಂಡು ಹೋದ ಶವ ಡಿಸೆಂಬರ್ 24 ರಂದು ಮುಂಬೈನ ಅಕ್ಷ ಬೀಚ್ ತಲುಪಿದೆ. ಇದನ್ನು ಗಮನಿಸಿದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹ ಗುರುತು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಸೊಸೆಯನ್ನು ಕೊಲೆಗೈದಿದ್ದ ಕಮಲ್ ಮತ್ತು ಆತನಿಗೆ ನೆರವಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.