ಕೇರಳದ ವ್ಯಕ್ತಿಯೊಬ್ಬ ರಾಕೆಟ್ ಸ್ಟೌವನ್ನ ಆವಿಷ್ಕಾರ ಮಾಡಿದ್ದು ಇದಕ್ಕೆ ಇಂಧನದ ರೂಪದಲ್ಲಿ ಎಲ್ಪಿಜಿ ಇಲ್ಲವೇ ವಿದ್ಯುತ್ನ ಅವಶ್ಯಕತೆ ಇಲ್ಲವಂತೆ. ಬದಲಾಗಿ ಇದಕ್ಕೆ ಕಟ್ಟಿಗೆ, ತೆಂಗಿನ ಕಾಯಿ ಸಿಪ್ಪೆ ಹಾಗೂ ಬೇಡವಾದ ಪೇಪರ್ಗಳನ್ನ ಇಂಧನ ರೂಪದಲ್ಲಿ ಬಳಕೆ ಮಾಡಬಹುದಾಗಿದೆ.
ಈ ರಾಕೆಟ್ ಸ್ಟೌವನ್ನ ನೀರನ್ನ ಬಿಸಿ ಮಾಡೋಕೆ ಇಲ್ಲವೇ ಅಡುಗೆ ಮಾಡೋಕೆ ಬಳಕೆ ಮಾಡಬಹುದಾಗಿದೆ. ಕೇರಳದ ಅಬ್ದುಲ್ ಕರೀಂ ಎಂಬವರು ಈ ನೂತನ ಯಂತ್ರವನ್ನ ಕಂಡುಹಿಡಿದಿದ್ದಾರೆ.
ಬಾಯ್ಲರ್, ಕುಲುಮೆ ಸೇರಿದಂತೆ ಇತರೆ ಕೈಗಾರಿಕಾ ವಸ್ತುಗಳ ತಯಾರಿಕೆಯಲ್ಲಿ ನಾಲ್ಕು ದಶಕಗಳ ಅನುಭವ ಹೊಂದಿರುವ ಅಬ್ದುಲ್ ಈ ರಾಕೆಟ್ ಸ್ಟೌವನ್ನ ಕಂಡು ಹಿಡಿದಿದ್ದಾರೆ. ಕೊರೊನಾದಿಂದ ಲಾಕ್ಡೌನ್ ವಿಧಿಸಲಾದ ಕಾರಣ ನನಗೆ ಈ 6 ತಿಂಗಳ ಅವಧಿಯಲ್ಲಿ ಇಂತಹದ್ದೊಂದು ಆವಿಷ್ಕಾರ ಮಾಡೋಕೆ ಸಾಧ್ಯವಾಯ್ತು ಅಂತಾರೆ ಅಬ್ದುಲ್ ಕರೀಂ.
ಹೈ ಎಂಡ್ ಮಾದರಿಯ ರಾಕೆಟ್ ಸ್ಟೌಗಳು ಮಾರಾಟಕ್ಕೆ ಲಭ್ಯವಿದ್ದು ಇವುಗಳ ಬೆಲೆ 14 ಸಾವಿರ ರೂಪಾಯಿ ಆಗಿದೆ. ಹೊಗೆಯನ್ನ ಹೊರಹಾಕಲು ಪೈಪ್ ವ್ಯವಸ್ಥೆ ಮಾಡಲಾಗಿದ್ದು ಫ್ಲಾಟ್ ಹಾಗೂ ಅಪಾರ್ಟ್ಮೆಂಟ್ಗಳಿಗೂ ಸೂಕ್ತವಾಗಿದೆ. ಸಾಮಾನ್ಯ ರಾಕೆಟ್ ಸ್ಟೌ ಬೆಲೆ 4500 ರೂಪಾಯಿಯಾಗಿದೆ. ಹೈ ಎಂಡ್ ಮಾದರಿಯ ಸ್ಟೌವನ್ನ ವಾಟರ್ ಹೀಟಿಂಗ್, ಗ್ರಿಲ್ಲಿಂಗ್, ಓವನ್ ಹೀಗೆ ಹಲವಾರು ವಿಧದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.
ಇದು ಹಳೆಯ ಆಲೋಚನೆಯಾಗಿದ್ದರೂ ಸಹ ಕೇರಳಿಗರ ಅಗತ್ಯಕ್ಕೆ ತಕ್ಕಂತೆ ಒಲೆಯನ್ನ ಮಾರ್ಪಾಡು ಮಾಡಲಾಗಿದೆ. ಉಳಿದ ಒಲೆಗಳಂತೆ ಇದಕ್ಕೆ ದೊಡ್ಡ ದೊಡ್ಡ ಕಟ್ಟಿಗೆಯ ಅಗತ್ಯವಿಲ್ಲ. ತ್ಯಾಜ್ಯ ಕಾಗದ, ದಹನಕಾರಿ ಯಾವುದೇ ಒಣ ವಸ್ತುಗಳನ್ನ ಬಳಸಿ ಅಡುಗೆ ಮಾಡಬಹುದಾಗಿದೆ.