ಎಟಿಎಂ ಗಳಲ್ಲಿ ಕನ್ನಡ ಮಾಯವಾಗಿದೆ. ಇಂಗ್ಲೀಷ್, ಹಿಂದಿ ಸೇರಿದಂತೆ ಹಲವು ಭಾಷೆಗಳು ಎಟಿಎಂನಲ್ಲಿವೆ. ಆದರೆ ಕನ್ನಡವೇ ಇಲ್ಲ ಅಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೀಗ ಬ್ಯಾಂಕ್ ಗಳಿಗೆ ಎಚ್ಚರಿಸಿದ್ದು, ಕೂಡಲೇ ಕನ್ನಡವನ್ನು ಮರುಜಾರಿಗೊಳಿಸುವಂತೆ ಖಡಕ್ ಸೂಚನೆ ನೀಡಿದೆ. ಅಲ್ಲದೆ ಈ ಕುರಿತಂತೆ ಟಿ.ಎಸ್. ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಆಡಳಿತದಲ್ಲೂ ಕನ್ನಡ ಅನುಷ್ಠಾನ ಆಗಬೇಕು ಎಂದು ಸರ್ಕಾರದ ಆದೇಶ ಇದೆ. ಆದರೆ ಇದೀಗ ಎಟಿಎಂಗಳಲ್ಲಿ ಕನ್ನಡ ಇಲ್ಲದೇ ಇರುವುದು ಕನ್ನಡಿಗರನ್ನು ಕೆರಳಿಸಿದೆ. ಹೀಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಲೀಡ್ ಬ್ಯಾಂಕ್ ಗೆ ಪತ್ರ ಬರೆದಿದ್ದಾರೆ. ಕೂಡಲೇ ಇದನ್ನು ಸರಿ ಮಾಡುವಂತೆ ಸೂಚಿಸಿದ್ದಾರೆ.
ಇನ್ನು ಬ್ಯಾಂಕ್ ವ್ಯವಹಾರದಲ್ಲಿ ಕನ್ನಡ ಕಡ್ಡಾಯವಾಗಬೇಕು. ಹಾಗೂ ಕನ್ನಡವನ್ನು ಬ್ಯಾಂಕ್ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಬ್ಯಾಂಕ್ ಗಳಲ್ಲಿ ಕನ್ನಡ ಬಳಕೆ ಎಂಬ ಅಭಿಯಾನಕ್ಕೆ ಇಂದಿನಿಂದ ಚಾಲನೆ ನೀಡಲಾಗುತ್ತಿದೆ. ರಾಜ್ಯದಲ್ಲಿನ ಲೀಡ್ ಬ್ಯಾಂಕ್ ಗಳ ಮುಂಭಾಗ ಜಾಗೃತಿ ಮೂಡಿಸಲು ಪ್ರಾಧಿಕಾರ ಮುಂದಾಗುತ್ತಿದೆ.