ರೈತರ ಅಹವಾಲುಗಳಿಗೆ ಸ್ಪಂದಿಸದೇ ಇದ್ದಲ್ಲಿ ಮತ್ತೊಮ್ಮೆ ಉಪವಾಸ ಸತ್ಯಾಗ್ರಹಕ್ಕೆ ಕೂರುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಮಹಾರಾಷ್ಟ್ರದ ಅಹಮದ್‌ನಗರದಲ್ಲಿರುವ ತಮ್ಮ ಸ್ವಗ್ರಾಮ ರಲೇಗಾಂವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಜಾರೆ, “ಕೇವಲ ಖಾಲಿ ಭರವಸೆಗಳನ್ನು ಕೊಡುತ್ತಿರುವ ಸರ್ಕಾರದ ಮೇಲೆ ನನಗೆ ಯಾವುದೇ ನಂಬಿಕೆ ಇಲ್ಲ. ನನ್ನ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಹೇಗೆ ಪರಿಗಣಿಸುತ್ತದೆ ಎಂದು ನೋಡೋಣ. ಒಂದು ತಿಂಗಳ ಕಾಲಾವಕಾಶವನ್ನು ಸರ್ಕಾರ ಕೇಳಿದೆ. ನನ್ನ ಬೇಡಿಕೆಗಳು ಈಡೇರದೇ ಇದ್ದಲ್ಲಿ, ನಾನು ನನ್ನ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವೆ. ಇದು ನನ್ನ ಕೊನೆಯ ಪ್ರತಿಭಟನೆಯಾಗಲಿದೆ” ಎಂದು ತಿಳಿಸಿದ್ದಾರೆ.
ಕೃಷಿ ಕ್ಷೇತ್ರದ ವೆಚ್ಚ ಹಾಗೂ ಬೆಲೆಗಳ ಸಮಿತಿಗೆ ಸ್ವಾಯತ್ತತೆ ಕೊಡುವಂತೆ ಸೂಚಿಸಿರುವ ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಕೋರಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಇದೇ ಡಿಸೆಂಬರ್ 14ರಂದು ಹಜಾರೆ ಪತ್ರ ಬರೆದಿದ್ದರು.