ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನವರಿ 4, 5 ರಂದು ಶಾಸಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ಶಾಸಕರ ಸಮಸ್ಯೆ ಆಲಿಸಿ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.
ಪಕ್ಷದ ರಾಜ್ಯ ಕಾರ್ಯಕಾರಣಿ ಸಭೆ ಜನವರಿ 2 ಮತ್ತು 3 ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 16 ರಿಂದ ರಾಜ್ಯದಲ್ಲಿ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ.
ಜನವರಿ 4, 5 ರಂದು ಸಿಎಂ ಯಡಿಯೂರಪ್ಪ ಬಜೆಟ್ ಸಿದ್ಧತೆ ಮತ್ತು ಕ್ಷೇತ್ರ ಅಭಿವೃದ್ಧಿ ಅನುದಾನದ ಬೇಡಿಕೆ ಕುರಿತು ಚರ್ಚಿಸಲು ಬಿಜೆಪಿ ಶಾಸಕರೊಂದಿಗೆ ಹಂತಹಂತವಾಗಿ ಸಭೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ವಿಭಾಗವಾರು ಪಕ್ಷದ ಶಾಸಕರ ಸಭೆ ನಡೆಸಿ ಅಹವಾಲು ಆಲಿಸಲಿದ್ದಾರೆ. ಎರಡು ದಿನಗಳ ಕಾಲ ಯಾವುದೇ ಅಧಿಕೃತ ಕಾರ್ಯಕ್ರಮ ನಿಗದಿಪಡಿಸಿದಂತೆ ಕಚೇರಿಯ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕೆಲವು ಶಾಸಕರು ಬಹಿರಂಗವಾಗಿ ಸರ್ಕಾರದ ಕಾರ್ಯವೈಖರಿ ಕುರಿತು ಹೇಳಿಕೆ ನೀಡುತ್ತಿದ್ದು, ಇವೇ ಮೊದಲಾದ ವಿಚಾರಗಳು ಮತ್ತು ಶಾಸಕರ ಅಸಮಾಧಾನ ಕುರಿತಾಗಿ ಸಭೆಯಲ್ಲಿ ಮುಖಾಮುಖಿಯಾಗಿ ಚರ್ಚೆನಡೆಸಲಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮತ್ತು ಅಮಿತ್ ಶಾ ಬರುವ ಮೊದಲು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಅಸಮಾಧಾನ ಶಮನಗೊಳಿಸಲು ಸಿಎಂ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.