ನವದೆಹಲಿ: ಕೇಂದ್ರ ಸರ್ಕಾರಿ ನೌಕರರನ್ನು ಆಯ್ಕೆ ಮಾಡಲು ಮುಂದಿನ ವರ್ಷದಿಂದ ಆನ್ಲೈನ್ ಮೂಲಕ ದೇಶಾದ್ಯಂತ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಪುಟದ ಅನುಮತಿಯೊಂದಿಗೆ ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನು ರಚಿಸಲಾಗಿದೆ. ಗ್ರೂಪ್ ಬಿ ಮತ್ತು ಗ್ರೂಪ್-ಸಿ ತಾಂತ್ರಿಕೇತರ ಹುದ್ದೆಗಳಿಗೆ ಸಿಇಟಿ ಪರೀಕ್ಷೆ ನಡೆಸಲಿದ್ದು, ಸರ್ಕಾರಿ ನೌಕರಿಗೆ ಸೇರಲು ಇಚ್ಚಿಸುವವರಿಗೆ ಈ ಪರೀಕ್ಷೆ ವರದಾನವಾಗಲಿದೆ ಎಂದು ಹೇಳಿದ್ದಾರೆ.
ಸರ್ಕಾರಿ ಉದ್ಯೋಗಕ್ಕಾಗಿ ಪ್ರಾಥಮಿಕ ಹಂತದ ಆಯ್ಕೆ ಪ್ರಕ್ರಿಯೆ ಆಗಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು. ದೇಶದ ಪ್ರತಿ ಜಿಲ್ಲೆಯಲ್ಲಿಯೂ ಪರೀಕ್ಷಾ ಕೇಂದ್ರ ಸ್ಥಾಪಿಸುಲಿದ್ದು, ಗ್ರಾಮಾಂತರ ಪ್ರದೇಶದ ಅಭ್ಯರ್ಥಿಗಳಿಗೂ ಅನುಕೂಲವಾಗುತ್ತದೆ.
ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನು ಸ್ಥಾಪನೆ ಮಾಡಿದರೂ ಕೂಡ ಆರ್.ಆರ್.ಬಿ., ಐಬಿಪಿಎಸ್ ಮತ್ತು ಎಸ್.ಎಸ್.ಸಿ. ಏಜೆನ್ಸಿಗಳು ಅಗತ್ಯಕ್ಕೆ ತಕ್ಕಂತೆ ನೇಮಕಾತಿ ಪ್ರಕ್ರಿಯೆ ನಡೆಸಲಿವೆ. ಪ್ರತಿ ಅಭ್ಯರ್ಥಿಗೂ ಅವಕಾಶ ನೀಡಲು ಪರೀಕ್ಷೆ ನಡೆಸಲಿದ್ದು, ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಉದ್ಯೋಗದ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.