ಬೆಂಗಳೂರು: ಅಧಿವೇಶನದಲ್ಲಿ ಹಿಂದೆ ನಾನು ದನದ ಮಾಂಸ ತಿನ್ತೀನಿ…. ನನ್ನ ಆಹಾರ ನನ್ನ ಹಕ್ಕು ಕಿತ್ತುಕೋಳೋಕೆ ನೀನ್ಯಾವನಯ್ಯ ಎಂದು ಪ್ರಶ್ನಿಸಿದ್ದೆ… ಕೆಲ ವಿಚಾರಗಳ ಬಗ್ಗೆ ನಮಗೆ ಸ್ಪಷ್ಟತೆಗಳಿರಬೇಕು ಅಂದಾಗ ಮಾತ್ರ ಎಲ್ಲವನ್ನೂ ಎದುರಿಸಲು ಸಾಧ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಮ್ಮವರು ಬಹಳ ಜನ ನಾವು ಹೀಗೆ ಮಾತಾಡಿದರೆ ಏನಂದುಕೊಳ್ಳುತ್ತಾರೋ ಎಂದು ಭಯ ಪಟ್ಟುಕೊಳ್ಳುತ್ತಾರೆ. ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ ನಮ್ಮಲ್ಲಿ ಸ್ಪಷ್ಟತೆ ಬೇಕು. ಅಧಿವೇಶನದಲ್ಲಿ ಹಿಂದೆ ನಾನು ಹೇಳಿದ್ದೆ… ನಾನು ದನದ ಮಾಂಸ ತಿನ್ತೀನಿ… ನಿನ್ಯಾವನಯ್ಯ ಕೇಳೋಕೆ ನನ್ನ ಆಹಾರ ಪದ್ಧತಿ ನನ್ನ ಇಷ್ಟ. ಅದು ನನ್ನ ಹಕ್ಕು. ನೀವೂ ತಿನ್ನಿ ಎಂದು ನಾನು ಹೇಳಲ್ಲ, ಬಲವಂತ ಮಾಡಲ್ಲ. ನನ್ನ ಆಹಾರ ನನಗೆ ಇಷ್ಟ… ಇದನ್ನು ಹೇಳಲು ಧೈರ್ಯಬೇಕಾ…? ಅವರು ಹೇಳಿದ್ದೇ ಸರಿ ಎಂದು ನಮ್ಮಲ್ಲಿ ಹಲವರು ಸುಮ್ಮನಾಗಿಬಿಡುತ್ತಾರೆ. ಇಂಥ ಗೊಂದಲಗಳಿಂದ ಹೊರಗೆ ಬರಬೇಕು ಎಂದರು.
ಗೋಹತ್ಯೆ ನಿಷೇಧ ಕುರಿತು ಮಾತನಾಡಿದ ಸಿದ್ದರಾಮಯ್ಯ, ಗೋವುಗಳನ್ನು ನಾವೂ ಪೂಜಿಸುತ್ತೇವೆ. ಆದರೆ ವಯಸ್ಸಾದ ಹಸು, ಎಮ್ಮೆಗಳನ್ನು ರೈತರು ಏನು ಮಾಡಬೇಕು? ಒಂದು ಹಸು ಸಾಕಲು ದಿನಕ್ಕೆ ಕನಿಷ್ಠ 100 ರೂಪಾಯಿ ಬೇಕು. ಅದನ್ನು ಕೊಡುವವರು ಯಾರು…? ಸಿದ್ದರಾಮಯ್ಯ ಗೋಮಾತೆ ವಿರೋಧಿ ಎಂದು ಬಿಜೆಪಿಯವರು ಹೇಳಿದರೂ ನಮ್ಮವರೆಲ್ಲ ಸುಮ್ಮನೆ ಇದ್ದರು? ಯಾರೋ ಒಬ್ಬಿಬ್ಬರು ಹೇಳಿದರೆ ಸಾಲಲ್ಲ. ನಮ್ಮಲ್ಲಿ ಒಗ್ಗಟ್ಟಿರಬೇಕು. ಕೆಲ ವಿಚಾರಗಳಲ್ಲಿ ನಮ್ಮಲ್ಲಿ ಸ್ಪಷ್ಟತೆ ಇದ್ದರೆ ಮಾತ್ರ ಬಿಜೆಪಿಯನ್ನು ಎದುರಿಸಲು ಸಾಧ್ಯ ಎಂದು ಕಾರ್ಯಕರ್ತರಿಗೆ ಪಾಠ ಹೇಳಿದ್ದಾರೆ.