ನವದೆಹಲಿ: ಕೊರೊನಾ ಲಾಕ್ ಡೌನ್ ಹಲವು ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಮಾಡುವಂತೆ ಮಾಡಿದೆ. ಮೊದಮೊದಲು ಕಠಿಣವೆನಿಸಿದ್ದ ವರ್ಕ್ ಫ್ರಂ ಹೋಂ ಪದ್ಧತಿಗೆ ಈ ಉದ್ಯೋಗಿಗಳು ಒಗ್ಗಿಕೊಂಡುಬಿಟ್ಟಿದ್ದಾರೆ. ಭಾರತದ ಹೆಚ್ಚಿನ ಉದ್ಯೋಗಿಗಳು ಈಗ ಮನೆಯಲ್ಲೇ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಇತ್ತೀಚಿನ ಡೆಲ್ ಕಂಪನಿಯ ಅಧ್ಯಯನವೊಂದು ಹೇಳಿದೆ.
ಡೆಲ್ ಕಂಪನಿ ವಿಶ್ವದೆಲ್ಲೆಡೆ ಇರುವ ತನ್ನ 7 ಸಾವಿರ ಉದ್ಯೋಗಿಗಳಿಂದ ಈ ಸಂಬಂಧ ಅಭಿಪ್ರಾಯ ಪಡೆದಿದೆ. ಅದರಲ್ಲಿ 1027 ಜನ ಭಾರತೀಯರಿದ್ದಾರೆ. 10 ರಲ್ಲಿ 9 ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದಿದ್ದಾರೆ. ಆದರೆ, ಸಮಸ್ಯೆ ಹೇಳಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಲವು ದಿನಗಳಿಂದ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿರುವುದರಿಂದ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದ ನಡುವೆ ನಮಗೆ ವ್ಯತ್ಯಾಸವೇ ಇಲ್ಲದಂತಾಗಿದೆ. ಅಲ್ಲದೆ, ಕೆಲವು ತಂತ್ರಜ್ಞಾನಗಳೂ, ಮೂಲ ಸೌಕರ್ಯಗಳೂ ನಮ್ಮ ಬೆಂಬಲಕ್ಕೆ ಬರುತ್ತಿಲ್ಲ ಎಂಬುದು ಉದ್ಯೋಗಿಗಳ ಗೋಳು.
“ವರ್ಕ್ ಫ್ರಂ ಹೋಂ ಪದ್ಧತಿಯಿಂದ ಕಂಪನಿಗೆ ತನ್ನ ಉದ್ಯೋಗಿಗಳಿಂದ ಗುಣಮಟ್ಟದ ಕೆಲಸ ಪಡೆಯಲು ತೊಡಕುಂಟಾಗುತ್ತಿದೆ. ಆದರೂ ನಾವು ಉದ್ಯೋಗಿಗಳನ್ನು ಬೆಂಬಲಿಸಲು ಸಿದ್ಧರಿದ್ದೇವೆ” ಎಂದು ಡೆಲ್ ಟೆಕ್ನಾಲಜಿಯ ಹಿರಿಯ ಹಿರಿಯ ನಿರ್ದೇಶಕ ಹಾಗೂ ಜಿಎಂ ಇಂದ್ರಜಿತ್ ಬೆಳಗುಂಡಿ ಹೇಳಿದ್ದಾರೆ.