ಬೆಂಗಳೂರು: ಜೆಡಿಎಸ್ ಬಗ್ಗೆ ಇತ್ತೀಚೆಗೆ ಹಲವು ಮಾತುಗಳನ್ನಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿವೆ. ಆದರೆ ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಅನಿವಾರ್ಯ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ. ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾ ಹೋದರೆ ನಾನು ತುಂಬಾ ಮಾತನಾಡುತ್ತೇನೆ. ಜೆಡಿಎಸ್ ಮನೆ ಅಲುಗಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಯಾರ ಮನೆ ಅಲುಗಾಡುತ್ತಿದೆ? ಹಾಲು, ಅಕ್ಕಿ ಎಲ್ಲಾ ಭಾಗ್ಯಗಳನ್ನು ಕೊಟ್ಟರೂ ಏನು ಪ್ರಯೋಜನವಾಯ್ತು? ಕಾಂಗ್ರೆಸ್ ಸೀಟುಗಳು 130 ಇದ್ದದ್ದು 78ಕ್ಕೆ ಯಾಕೆ ಇಳಿಯಿತು? ಜೆಡಿಎಸ್ ಜೊತೆ ಕೈ ಜೋಡಿಸಿದ್ದಕ್ಕೆ ಸೀಟು ಕಳೆದುಕೊಂಡೆವು ಎನ್ನುತ್ತಾರೆ. ನಾವು 28 ಸೀಟುಗಳನ್ನು ಕಳೆದುಕೊಂಡ್ವಿ. ಕಾಂಗ್ರೆಸ್ ನವರು 50 ಸೀಟ್ ಕಳೆದುಕೊಂಡ್ರು. ಒಂದು ನಗರಸಭೆ ಸೀಟ್ ಕೂಡ ಅವರಿಗೆ ಗೆಲ್ಲಲು ಆಗಿಲ್ಲ ನಮ್ಮ ಬಗ್ಗೆ ಆರೋಪ ಮಾಡುವುದು ಎಷ್ಟು ಸರಿ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಮನೆ ಬಾಗಿಲು ಅಲುಗಾಡುತ್ತಿದೆ ಎಂದು ಕೆಲವರು ಲಘುವಾಗಿ ಮಾತನಾಡುತ್ತಿದ್ದಾರೆ. ಯಾರೆಲ್ಲ ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಸಿದ್ದರಾಮಯ್ಯ, ಖರ್ಗೆ, ಮುನಿಯಪ್ಪ, ಗುಲಾಂ ನಬಿ ಎಲ್ಲರೂ ಬಂದಿದ್ದರು. ಆದರೂ ಯಾರಿಂದಲೂ ನಮ್ಮನ್ನು ಅಲುಗಾಡಿಸಲೂ ಆಗಿಲ್ಲ. ಕಾಂಗ್ರೆಸ್ ನಲ್ಲಿ ಮೂವರು ಅಲುಗಾಡುತ್ತಿದ್ದಾರೆ. ವಾಸ್ತವವನ್ನು ಅರಿತು ಮಾತನಾಡಬೆಕು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಓರ್ವ ಕನ್ನಡಿಗ ಪ್ರಧಾನಿಯಾಗುವ ಮಟ್ಟವೂ ಬಂತು. ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಾಗಿರಲಿಲ್ಲ. ನಂತರ ನನ್ನನ್ನು ಬಿಟ್ಟು ಸರ್ಕಾರ ರಚನೆ ಮಾಡಿದರು. ನಾನು ಏಕಾಂಗಿಯಾದೆ. ಬಳಿಕ ಎಲ್ಲರೂ ನನ್ನ ಬಳಿಯೇ ಬಂದರು. ಯಾರ ಬಗ್ಗೆಯೂ ನಾನು ಆರೋಪ ಮಾಡುತ್ತಿಲ್ಲ. ರಾಜಕೀಯದಲ್ಲಿ ಸೋಲು-ಗೆಲುವು ಸಹಜ ಎಂದು ಹೇಳಿದರು.