ಸಾರ್ವಜನಿಕ ಟಾಯ್ಲೆಟ್ ಗೋಡೆ ಮೇಲೆ ತನ್ನ ಫೋನ್ ನಂಬರನ್ನು ದುಷ್ಕರ್ಮಿಯೊಬ್ಬ ಬರೆದ ಕಾರಣ ಪ್ರತಿನಿತ್ಯ ಭಾರೀ ಸಂಖ್ಯೆಯಲ್ಲಿ ಕರೆಗಳು ಹಾಗೂ ಸಂದೇಶಗಳನ್ನು ನೋಡಿ ನೋಡಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಬೇಸತ್ತು ಹೋಗಿದ್ದಾರೆ.
ಚಿಕ್ಕಮಗಳೂರಿನ ಕಡೂರಿನ ಸತೀಶ್ ಸಿಎಂ ಹೆಸರಿನ 33 ವರ್ಷದ ವ್ಯಕ್ತಿಯೊಬ್ಬಬ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ದೂರವಾಣಿ ಸಂಖ್ಯೆಯನ್ನು ಕಡೂರು ಬಸ್ ನಿಲ್ದಾಣದ ಟಾಯ್ಲೆಟ್‌ನ ಗೋಡೆ ಮೇಲೆ ಬರೆದುಬಿಟ್ಟಿದ್ದಾನೆ.
ಮಾಜಿ ಸಹಪಾಠಿಗಳೆಲ್ಲಾ ಸೇರಿಕೊಂಡು ವಾಟ್ಸಾಪ್ ಗ್ರೂಪ್ ಮಾಡಿಕೊಂಡ ಬಳಿಕ ಸತೀಶನಿಗೆ ಈ ಮಹಿಳಾ ಅಧಿಕಾರಿಗೆ ಸಂಪರ್ಕ ಸಿಕ್ಕಿದೆ. 2017ರಲ್ಲಿ ಆತನಿಗೆ ಈ ಕಾಂಟಾಕ್ಟ್ ಸಿಕ್ಕ ಬಳಿಕ ಮಹಿಳಾ ಅಧಿಕಾರಿಗೆ ಆತ ಪ್ರತಿನಿತ್ಯ ಕರೆ ಮಾಡುತ್ತಾ/ಸಂದೇಶ ಕಳುಹಿಸುತ್ತಾ ಕಿರುಕುಳ ಕೊಡುತ್ತಾ ಬಂದಿದ್ದಾನೆ. ಆದರೆ ಆತನ ಈ ನಡವಳಿಕೆಯನ್ನು ಆಕೆ ನಯವಾಗಿಯೇ ವಿರೋಧಿಸುತ್ತಾ ಬಂದಿದ್ದಾರೆ.
ಇದರಿಂದ ಕುಪಿತಗೊಂಡ ಸತೀಶ್ ಆಕೆಯನ್ನು ವಾಟ್ಸಾಪ್ ಗ್ರೂಪ್‌ನಿಂದ ತೆಗೆದು ಹಾಕಿದ್ದಾನೆ. ಈ ವೇಳೆ ಗ್ರೂಪ್‌ನಲ್ಲಿದ್ದ ಇತರ ಸ್ನೇಹಿತರು ಆಕೆಯನ್ನು ಮತ್ತೆ ಸೇರಿಸಿದಾಗ ಅವರೊಂದಿಗೆ ವಾದಕ್ಕೆ ಇಳಿದಿದ್ದಾನೆ ಸತೀಶ್.
ಇಷ್ಟು ಸಾಲದೆಂಬಂತೆ ಮಹಿಳಾ ಅಧಿಕಾರಿಯ ಸಂಖ್ಯೆಯನ್ನು ಬಸ್ ನಿಲ್ದಾಣದ ಟಾಯ್ಲೆಟ್ ಗೋಡೆಯ ಮೇಲೆ ಬರೆದಿದ್ದಾನೆ ಕಾಮುಕ ಸತೀಶ್. ಅಲ್ಲಿ ನಂಬರ್ ತೆಗೆದುಕೊಂಡ ಇನ್ನಷ್ಟು ಕಾಮುಕರು ಈ ಮಹಿಳಾ ಅಧಿಕಾರಿಗೆ ಕಾಲ್/ಮೆಸೇಜ್ ಮಾಡುತ್ತಾ ಟಾರ್ಚರ್ ಕೊಟ್ಟಿದ್ದಾರೆ.
ಸತೀಶನನ್ನು ಐಪಿಸಿಯ 354ಡಿ ಹಾಗೂ 509 (ಮಹಿಳೆಯ ಘನತೆಗೆ ಚ್ಯುತಿ ಬರುವ ನಡವಳಿಕೆ) ವಿಧಿಗಳ ಅಡಿ ಬಂಧಿಸಲಾಗಿದೆ.