ಬೆಂಗಳೂರು: ಜನವರಿ 16ರಂದು ಅಮಿತ್ ಶಾ ವಿಜಯಪುರಕ್ಕೆ ಬರುತ್ತಿದ್ದು, ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಆಗುತ್ತೋ, ಬದಲಾವಣೆ ಆಗುತ್ತೋ, ಇಲ್ಲಾ ಮತ್ತಿನ್ನೇನಾದರೂ ಆಗುತ್ತೋ ಗೊತ್ತಿಲ್ಲ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಿಡಿಕಾರಿದ್ದು, ಇಂಥಹ ಹೇಳಿಕೆ ನೀಡಲು ಯತ್ನಾಳ್ ಯಾರು? ಎಂದು ಪ್ರಶ್ನಿಸಿದ್ದಾರೆ.
ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸದಾನಂದಗೌಡ, ಯತ್ನಾಳ್ ಓರ್ವ ಆರ್ಡಿನರಿ ಶಾಸಕ. ಅವರು ಪಕ್ಷದ ಅಧ್ಯಕ್ಷರಲ್ಲ. ಮಾತನಾಡುವುದಿದ್ದರೆ ಪಕ್ಷದ ಚೌಕಟ್ಟಿನೊಳಗೆ ಮಾತನಾಡಲಿ. ಹೊರತು ಬೀದಿಯಲ್ಲಿ ಮಾತನಾಡುವುದು ಶೋಭೆ ತರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇಂಥಹ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.