ಬೆಂಗಳೂರು: ಮೊಬೈಲ್ ಖರೀದಿಸುವಾಗ ರಂಗಿನ ಬ್ಯಾಗ್ ಕೊಟ್ಟರೆ ಅದೆಲ್ಲ ಉಚಿತವಾಗಿ ಸಿಕ್ಕಿದೆ ಎಂದು ಖುಷಿಪಡುತ್ತೇವೆ. ಆದರೆ ಬ್ಯಾಗ್ ಗೂ ಬೆಲೆ ಪಡೆದಿರಬಹುದು ಒಮ್ಮೆ ಬಿಲ್ ಅನ್ನು ವಿವರವಾಗಿ ಪರಿಶೀಲಿಸಿ. ಮೊಬೈಲ್ ಜತೆ ಕೊಟ್ಟ ಕ್ಯಾನ್ವಾಸ್ ಬ್ಯಾಗ್ ಗೆ ಹಣ ಪಡೆದ ಮೊಬೈಲ್ ಮಾರಾಟ ಕಂಪನಿಗೆ ಬೆಂಗಳೂರಿನ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿದೆ.
ರಾಮನಗರದ ಶ್ರೀನಿವಾಸ ಜಿ.ವಿ. ಎಂಬುವವರು ದೂರು ಸಲ್ಲಿಸಿದ್ದರು. ಸಂಗೀತಾ ಮೊಬೈಲ್ಸ್ ರಾಜಾಜಿನಗರ ಶಾಖೆಗೆ ಬೆಂಗಳೂರು ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿದೆ.
ಮಾನಸಿಕ ಕಿರುಕುಳ ಹಾಗೂ ದಾವೆಯ ಖರ್ಚಿಗಾಗಿ 1500 ರೂ. ದಂಡವನ್ನು ಗ್ರಾಹಕನಿಗೆ ನೀಡುವಂತೆ ಆದೇಶಿಸಿದೆ. ಅಲ್ಲದೆ, ಬ್ಯಾಗ್ ಗಾಗಿ ಪಡೆದ 17.8 ರೂ.ಗಳನ್ನೂ ಒಂದು ತಿಂಗಳಲ್ಲಿ ಮರಳಿಸುವಂತೆ ಸೂಚಿಸಿದೆ.
2019 ರ ಮೇ ತಿಂಗಳಲ್ಲಿ ಶ್ರೀನಿವಾಸ ಅವರು 13,220 ರೂ. ಪಾವತಿಸಿ ಸಂಗೀತಾ ಶಾಪ್ ನಲ್ಲಿ ಮೊಬೈಲ್ ಒಂದನ್ನು ಕೊಂಡಿದ್ದರು. ಮನೆಗೆ ಬಂದ ಬಳಿಕ ವಿವರವಾಗಿ ಇನ್ವಾಯ್ಸ್ ನೋಡಿದಾಗ ಕಂಪನಿಯ ಲೋಗೋ ಇರುವ ಬ್ಯಾಗ್ ಗೆ 17.8 ರೂ. ಪಡೆಯಲಾಗಿತ್ತು.
ಅದನ್ನು ಶ್ರೀನಿವಾಸ ಅವರು ಶಾಪ್ ಗೆ ತೆರಳಿ ಪ್ರಶ್ನಿಸಿದರು. ಆದರೆ, ಅಲ್ಲಿನ ಮ್ಯಾನೇಜರ್ ಅದಕ್ಕೆ ಸ್ಪಂದನೆ ನೀಡಲಿಲ್ಲ. ಮೊಬೈಲ್ ಜತೆ ಬ್ಯಾಗ್ ಪಡೆಯುವುದು ಕಡ್ಡಾಯ ಎಂದಿದ್ದರು. ಇದರಿಂದ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಕಂಪನಿಯ ಜಾಹೀರಾತಿಗಾಗಿ ಬ್ಯಾಗ್ ನೀಡುವುದು ಸರಿ. ಆದರೆ, ಅದನ್ನು ಒತ್ತಾಯಪೂರ್ವಕವಾಗಿ ಹೇರುವುದು ತಪ್ಪು ಎಂದು ಅಭಿಪ್ರಾಯಪಟ್ಟಿದೆ.