ನವದೆಹಲಿ: ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಸರ್ಕಾರ ರೈತರ 50 ಸಾವಿರ ರೂ. ವರೆಗಿನ ಕೃಷಿ ಸಾಲ ಮನ್ನಾ ಮಾಡಲು ನಿರ್ಧರಿಸಿದೆ. ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
2014 ರ ಏಪ್ರಿಲ್ 1ರಿಂದ 2020 ರ ಮಾರ್ಚ್ 31 ರವರೆಗೆ ಸಾಲ ಪಡೆದ ಸುಮಾರು 7.61 ಲಕ್ಷ ರೈತರಿಗೆ ಇದರಿಂದ ಪ್ರಯೋಜನ ಸಿಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ಮನ್ನಾ ಮಾಡಲು ಸರ್ಕಾರ 2000 ಕೋಟಿ ರೂಪಾಯಿ ನಿಗದಿಪಡಿಸಿದೆ.
ಪಡೆದುಕೊಂಡ ಸಾಲದ ಕನಿಷ್ಠ 1 ಕಂತು ಪಾವತಿಸಿದ ರೈತರು ಸಾಲ ಮನ್ನಾ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಅಜಯ್ ಕುಮಾರ್ ತಿಳಿಸಿದ್ದಾರೆ. ರೈತರು ಪಡಿತರ ಚೀಟಿ ಮತ್ತು ಬ್ಯಾಂಕುಗಳಿಗೆ ಲಿಂಕ್ ಮಾಡಿರುವ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ನಂತರ ಸರ್ಕಾರ ನೇರವಾಗಿ ಸಾಲದ ಮೊತ್ತವನ್ನು ಅವರ ಖಾತೆಗೆ ವರ್ಗಾಯಿಸುತ್ತದೆ.
ಡಿಸೆಂಬರ್ 29 ರಂದು ಹೇಮಂತ್ ಸೊರೇನ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳ್ಳಲಿದ್ದು, ಆ ದಿನದಂದು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಾಗುತ್ತದೆ. ಇನ್ನು ರೈತರಿಗೆ ಬೆಳೆ ನಷ್ಟಕ್ಕೆ ಕೂಡ ಸರ್ಕಾರ ಪರಿಹಾರ ನೀಡುವುದಾಗಿ ತಿಳಿಸಲಾಗಿದೆ.