ಬೆಂಗಳೂರು: ರೂಪಾಂತರ ಕೊರೊನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ನೈಟ್ ಕರ್ಫ್ಯೂ ಅಪಹಾಸ್ಯಕ್ಕೆ ಕಾರಣವಾಗಿದೆ. ರಾತ್ರಿ ವೇಳೆ ಮಾತ್ರ ಕರ್ಫ್ಯೂ ಜಾರಿ ಮಾಡಿರುವುದು ವಿಪಕ್ಷ ಹಾಗೂ ಸಾರ್ವಜನಿಕರಿಂದಲೂ ಟೀಕೆಗೆ ಗುರಿಯಾಗಿದೆ. ಈ ನಡುವೆ ಸರ್ಕಾರದ ನಿರ್ಧಾರವನ್ನು ಸಚಿವ ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ಜಾರಿಗೆ ಸಲಹೆ ಬಂದಿತ್ತು. ಆದರೆ ಪಬ್, ಬಾರ್ ಗಳಲ್ಲಿ ಜನರನ್ನು ನಿಯಂತ್ರಿಸುವುದು ಸಮಸ್ಯೆಯಾಗುತ್ತಿತ್ತು. ಸಿಎಂ ವಿವೇಚನೆಯಿಂದಲೇ ಕರ್ಫ್ಯೂ ಜಾರಿ ನಿರ್ಧಾರ ಕೈಗೊಳ್ಳಲಾಗಿದೆ. ನಿನ್ನೆಯಿಂದಲೇ ಕರ್ಫ್ಯೂ ಜಾರಿ ಮಾಡಬಹುದಿತ್ತು. ಆದರೆ ಸಿದ್ಧತೆಗೆ ಒಂದು ದಿನ ಕಾಲಾವಕಾಶ ಕೇಳಿದರು. ಹೀಗಾಗಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿಗೆ ತರಲಾಗುತ್ತಿದೆ ಎಂದರು.
ಇದೇ ವೇಳೆ ವಿಪಕ್ಷಗಳ ವಿರುದ್ಧ ಹರಿಹಾಯ್ದ ಸಚಿವರು, ಕೋವಿಡ್ ನಿಯಂತ್ರಣಕ್ಕೆ ನಮ್ಮ ಸಹಕಾರವಿದೆ. ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ವಿಪಕ್ಷ ನಾಯಕರು ಯಾವುದೇ ಸಹಕಾರ ನೀಡುತ್ತಿಲ್ಲ. ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ಅದನ್ನು ವಿರೋಧಿಸುವುದೇ ಅವರ ಕೆಲಸವಾಗಿದೆ ಎಂದು ಕಿಡಿಕಾರಿದರು.