ಬೆಂಗಳೂರು: ದೂರು ನೀಡಲು ಬಂದ ಮಹಿಳೆಯಿಂದ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಅಪರೂಪದ ಆದೇಶ ಹೊರಡಿಸಿದ್ದು, ಇನ್ಸ್ ಪೆಕ್ಟರ್ ಗೆ ಒಂದು ವಾರ ಕಸಗುಡಿಸುವ ಶಿಕ್ಷೆ ವಿಧಿಸಿದೆ.
ಕಲಬುರ್ಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗೆ ಒಂದು ವಾರ ಸ್ಟೇಷನ್ ಮುಂದಿನ ರಸ್ತೆಯನ್ನು ಸ್ವಚ್ಛಗೊಳಿಸುವಂತೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ.
ಮೀಣಜಗಿ ತಾಂಡಾದ ಕೂಲಿ ಕೆಲಸ ಮಾಡುವ ಮಹಿಳೆ ತಾರಾಬಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಸ್. ಸುನಿಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಪಿ. ಕೃಷ್ಣಭಟ್ ಅವರುಗಳಿದ್ದ ಕಲಬುರ್ಗಿ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
2020 ರ ಆಗಸ್ಟ್ 20 ರಿಂದ ತಮ್ಮ ಮಗ ಸುರೇಶ್ ನಾಪತ್ತೆಯಾಗಿರುವುದಾಗಿ ತಾರಾಬಾಯಿ ದೂರು ನೀಡಲು ಹೋಗಿದ್ದರು. ಆದರೆ, ಆ ದೂರನ್ನು ಸ್ವೀಕರಿಸಿರಲಿಲ್ಲ. ಮಗನನ್ನು ಪತ್ತೆ ಮಾಡಿರಲಿಲ್ಲ. ಇದರಿಂದಾಗಿ ತಾರಾಬಾಯಿ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗೆ ಒಂದು ವಾರ ಠಾಣೆ ಮುಂದಿನ ರಸ್ತೆ ಕಸ ಗುಡಿಸುವ ಶಿಕ್ಷೆ ನೀಡಲಾಗಿದೆ.