ಬೆಂಗಳೂರು: ಸರ್ಕಾರದಿಂದ ಕಾಟಾಚಾರದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಜನರು ಓಡಾಡದ ಸಂದರ್ಭದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.
ಡಿಸೆಂಬರ್ 24 ರಂದು ರಾತ್ರಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿಯಾದರೆ ಜನರಿಗೆ ಕಷ್ಟವಾಗುತ್ತದೆ ಎಂದು ನಾಳೆಯಿಂದ ನೈಟ್ ಕರ್ಫ್ಯೂ ಜಾರಿಗೆ ತೀರ್ಮಾನಿಸಲಾಗಿದೆ.
ಈ ವೇಳೆ ಬಸ್ ಗಳು ಓಡಾಡಬಹುದು. ಆಟೋ-ಟ್ಯಾಕ್ಸಿ ಸಂಚರಿಸಬಹುದು. ಗೂಡ್ಸ್ ವಾಹನ ಸಂಚರಿಸಬಹುದು. ಇದೆಲ್ಲಾ ಕಾಟಾಚಾರದ ನೈಟ್ ಕರ್ಫ್ಯೂ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಕೊರೋನಾ ರೂಪಾಂತರ ನಂತರದಲ್ಲಿ ಬ್ರಿಟನ್ ನಿಂದ ರಾಜ್ಯಕ್ಕೆ 2 ಸಾವಿರಕ್ಕೂ ಅಧಿಕ ಜನ ಬಂದಿದ್ದು, ಅವರೆಲ್ಲರ ಸಂಪೂರ್ಣ ಮಾಹಿತಿ ಇಲ್ಲವೆನ್ನಲಾಗಿದೆ. 2- 3 ದಿನಗಳಿಂದ ಬಂದವರ ಮಾಹಿತಿ ಮಾತ್ರ ಇದ್ದು, ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೆ, ಬಹುತೇಕ ಅಗತ್ಯ ವಸ್ತುಗಳ ಪೂರೈಕೆ ರಾತ್ರಿಯೇ ಆಗುವುದು. ಜನ ಸಂದಣಿ ಉಂಟಾಗುವ ಹಗಲಲ್ಲಿ ನಿರ್ಬಂಧ ಸಡಿಲಿಸಿ ರಾತ್ರಿ ಮಾತ್ರ ನಿರ್ಬಂಧ ಹೇರಲಾಗಿದೆ.
ಅದೂ ಸಂಪೂರ್ಣವಾಗಿ ಅಲ್ಲ. ಕೆಲವರಿಗೆ ಮಾತ್ರ ಸರ್ಕಾರದ ನಿಯಮ ಅನ್ವಯಿಸುತ್ತಿದ್ದು, ಉಳಿದವರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಶ್ರೀಮಂತರ ಮದುವೆ, ರಾಜಕೀಯ ಸಮಾರಂಭಕ್ಕೆ ನಿರ್ಬಂಧವಿಲ್ಲ. ಆದರೆ, ಬಡವರಿಗೆ ಮಾತ್ರ ಫೈನ್ ಹಾಕಲಾಗುತ್ತಿದೆ ಎನ್ನುವ ದೂರು ಕೇಳಿಬಂದಿವೆ.
ಈ ಹಿಂದೆ ಗಣಪತಿ ಹಬ್ಬದ ಸಂದರ್ಭದಲ್ಲಿ ಕೊನೆ ಗಳಿಗೆಯಲ್ಲಿ ಸಾರ್ವಜನಿಕವಾಗಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ನಿರ್ಬಂಧ ಹೇರಲಾಗಿತ್ತು. ಇದರಿಂದಾಗಿ ಗಣಪತಿ ಮೂರ್ತಿ ತಯಾರಕರು ಭಾರಿ ನಷ್ಟ ಅನುಭವಿಸಿದ್ದರು. ದೀಪಾವಳಿ ಸಂದರ್ಭದಲ್ಲಿ ಕೊನೆ ವೇಳೆಯಲ್ಲಿ ಪಟಾಕಿಗೆ ನಿರ್ಬಂಧ ಹೇರಿದ್ದರಿಂದ ಪಟಾಕಿ ದಾಸ್ತಾನು ಮಾಡಿದ್ದ ಮಾರಾಟಗಾರರು ಭಾರಿ ನಷ್ಟ ಅನುಭವಿಸಿದ್ದರು.
ಈಗ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ವೇಳೆಯಲ್ಲಿ ಹೋಟೆಲ್, ಪಬ್, ಕ್ಲಬ್, ಬಾರ್, ರೆಸ್ಟೋರೆಂಟ್ ಮಾಲೀಕರು ಅಲ್ಪಸ್ವಲ್ಪ ಆದಾಯದ ನಿರೀಕ್ಷೆಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ರಾತ್ರಿ 11 ಗಂಟೆಯಿಂದ ಎಲ್ಲಾ ಪ್ರಯಾಣಿಕ, ಸರಕು ವಾಹನಗಳಿಗೆ ಅವಕಾಶ ನೀಡಿ ಹೋಟೆಲ್ ಗಳಿಗೆ ಮಾತ್ರ ನಿರ್ಬಂಧ ವಿಧಿಸಿದೆ. ಕೊರೋನಾ ತಡೆಯುವ ಉದ್ದೇಶದಿಂದ ನೈಟ್ ಕರ್ಫ್ಯೂ ಜಾರಿ ಮಾಡಿದಂತಿಲ್ಲ. ನೈಟ್ ಕರ್ಫ್ಯೂ ಕಾಟಾಚಾರಕ್ಕೆ ಜಾರಿ ಮಾಡಲಾಗಿದೆ. ನೈಟ್ ಕರ್ಫ್ಯೂ ಬದಲು ರಾತ್ರಿ 11 ಗಂಟೆ ನಂತರ ಹೋಟೆಲ್, ಪಬ್ ಬಂದ್ ಮಾಡಿ ಅಂದಿದ್ರೆ ಸರಿಯಾಗ್ತಿತ್ತು ಎನ್ನಲಾಗಿದೆ.
ಕೊರೋನಾ ತಡೆಗೆ ಸರ್ಕಾರ ಬಿಗಿ ಕ್ರಮಕೈಗೊಂಡಿತ್ತು. ಜನ ನಿರ್ಲಕ್ಷ್ಯ ತೋರಿದ್ದರಿಂದ ಕೊರೋನಾ ಹೆಚ್ಚಾಯ್ತು ಎಂದು ಸರ್ಕಾರ ಹೇಳಿದ್ರೆ ಅದು ಸರ್ಕಾರದ ವಿಫಲತೆಯಾಗುತ್ತೆ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬಂದಿದೆ.
ಸರ್ಕಾರದ ಈ ಕಾಟಾಚಾರದ ನೈಟ್ ಕರ್ಫ್ಯೂ ನಿರ್ಧಾರಕ್ಕೆ ಮಾಜಿ ಸಚಿವ ಹೆಚ್.ಸಿ. ಮಹಾದೇವಪ್ಪ ಚಾಟಿ ಬೀಸಿದ್ದು, ರಾತ್ರಿ ಮಾತ್ರ ಎಚ್ಚರವಿರಲು ಕೊರೋನಾ ಏನು ಗೂಬೇನಾ? ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದೇ ಬಿಟ್ಟುಕೊಂಡಿರುವುದು ಸರ್ಕಾರದ ನಿರ್ಲಕ್ಷ್ಯ ತೋರುತ್ತದೆ ಎಂದು ಕಿಡಿಕಾರಿದ್ದಾರೆ.