ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರ ವೈರಸ್ ಆತಂಕದ ನಡುವೆಯೇ ಸರ್ಕಾರ ಈ ಹಿಂದೆ ನಿಗದಿಪಡಿಸಿದಂತೆ ಜನವರಿ 1ರಿಂದಲೇ ಶಾಲೆಗಳು ಪುನರಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಇಂದು ಸಿಇಒ, ಡಿಡಿಪಿಐ, ಡಿಡಿಪಿಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಸಭೆಯಲ್ಲಿ ಎಲ್ಲರೂ ಶಾಲೆಗಳನ್ನು ಆರಂಭಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದ್ದೆವು. ಜಿಲ್ಲಾಡಳಿತ ಕೂಡ ಸಹಕಾರ ನೀಡಿತ್ತು. ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕ ಭವಿಷ್ಯ ಗಮನದಲ್ಲಿಟ್ಟುಕೊಂಡು ಶಾಲೆಗಳನ್ನು ಜನವರಿ 1ರಿಂದಲೇ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
* ಇನ್ನು ಶಾಲೆಗಳಿಗೆ ಮಕ್ಕಳನ್ನು ಕಳಿಸುವುದು ಪೋಷಕರ ಆಯ್ಕೆ. ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಬಗ್ಗೆ ಯಾವುದೇ ಒತ್ತಾಯವಿಲ್ಲ. ಶಾಲೆಗೆ ಬರುವ ಮಕ್ಕಳು ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಬಂದರೆ ಮಾತ್ರ ತರಗತಿಗಳಿಗೆ ಅವಕಾಶ ನೀಡಲಾಗುವುದು.
* ತರಗತಿಗಳಿಗೆ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
* ಶಿಕ್ಷಕರಿಗೆ ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಕಡ್ಡಾಯ.
* 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಮಾಸ್ಕ್ ಜೊತೆ ಫೇಸ್ ಶೀಲ್ಡ್ ಕಡ್ಡಾಯ.
* ವಿದ್ಯಾಗಮಕ್ಕೂ ಚರ್ಚೆ ನಡೆಸಿದ್ದು, ಹೈಕೋರ್ಟ್ ಕೂಡ ವಿದ್ಯಾಗಮ ಆರಂಭಿಸಲು ಅನುಮತಿ ನೀಡಿದೆ.
* ಸದ್ಯಕ್ಕೆ ಬಿಸಿಯೂಟ ನೀಡುವ ವ್ಯವಸ್ಥೆ ಇಲ್ಲ. ಬಿಸಿಯೂಟ ನೀಡಿದರೆ ಮಕ್ಕಳು ಗುಂಪು ಸೇರುತ್ತಾರೆ. ಹೀಗಾಗಿ ಬಿಸಿಯೂಟ ನೀಡದಿರಲು ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನು ರೂಪಾಂತರ ವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ರೂಪಾಂತರ ವೈರಸ್ ನಿಂದಾಗಿ ಶಾಲಾ-ಕಾಲೇಜು ಆರಂಭದ ವಿಚಾರದಲ್ಲಿ ಪುನರ್ ಪರಿಶೀಲನೆ ಅಗತ್ಯವಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ ಎಂದರು.