ಬೆಂಗಳೂರು: ಕೊರೊನಾ ರೂಪಾಂತರ ವೈರಸ್ ಆತಂಕ ಹೆಚ್ಚಿದ ಬೆನ್ನಲ್ಲೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಾಂತ್ರಿಕ ಸಲಹಾ ಸಮಿತಿ ತಜ್ಞರ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಇಂಗ್ಲೆಂಡ್ ನಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ರೂಪಾಂತರ ವೈರಾಣು ರಾಜ್ಯಕ್ಕೂ ಕಾಲಿಡುವ ಸಾಧ್ಯತೆ ದಟ್ಟವಾಗಿದ್ದು, ವೈರಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಕೊರೊನಾ ಹೊಸ ರೂಪಾಂತರ ಖಂಡಿತವಾಗಿಯೂ ರಾಜ್ಯಕ್ಕೆ ಕಾಲಿಡಲಿದೆ. ಎಷ್ಟೇ ಮುಂಜಾಗೃತಾ ಕ್ರಮ ಕೈಗೊಂಡರೂ ಕೂಡ ಈ ವೈರಾಣು ನಮ್ಮನ್ನು ಕಾಡಲಿದೆ. ಕಳೆದ ಜನವರಿಯಲ್ಲಿ ವಿಮಾನಯಾನ ಸ್ಥಗಿತಗೊಳಿಸಿದ್ದರೂ ಕೂಡ ಕೊರೊನಾ ಸೋಂಕು ರಾಜ್ಯಕ್ಕೆ ಬಂದಿತ್ತು. ಹೀಗಾಗಿ ಕೊರೊನಾ ಹೊಸ ರೂಪಾಂತರ ಕೂಡ ರಾಜ್ಯದಲ್ಲಿ ಹರಡುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರೂಪಾಂತರ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಬ್ರಿಟನ್ ನಿಂದ ಬರುವ ವಿಮಾನ ಮಾತ್ರವಲ್ಲ ದೇಶಿಯ ವಿಮಾನಗಳನ್ನು ಪ್ರಮುಖವಾಗಿ ಚೆನ್ನೈ, ಮುಂಬೈ, ದೆಹಲಿಯಂತಹ ನಗರಗಳ ವಿಮಾನ ಯಾನಗಳನ್ನು ಕೂಡ ಸ್ಥಗಿತಗೊಳಿಸಬೇಕು. ಅಂತರಾಜ್ಯ ಓಡಾಟಕ್ಕೂ ನಿರ್ಬಂಧ ಹೇರುವುದ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.