ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಘಟಕ ಮಹಾ ಎಡವಟ್ಟು ಮಾಡಿಕೊಂಡಿದೆ. ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸ್ಥಾನಕ್ಕೆ ಬಿಜೆಪಿ ನಾಯಕನನ್ನು ಆಯ್ಕೆ ಮಾಡಿ ಮುಜುಗರಕ್ಕೆ ಒಳಗಾಗಿದೆ.
ಮಧ್ಯಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿ ಸ್ಥಾನಕ್ಕೆ ಬಿಜೆಪಿ ನಾಯಕನನ್ನು ಆಯ್ಕೆ ಮಾಡುವ ಮೂಲಕ ಪಕ್ಷದ ನಾಯಕರು ನಗೆಪಾಟಲಿಗೀಡಾಗಿದ್ದಾರೆ. ಹರ್ಷಿತ್ ಸಿಂಘಾಯ್ ಕಳೆದ ಮಾರ್ಚ್ ನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಕಾಂಗ್ರೆಸ್ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ಕಾಂಗ್ರೆಸ್ ನಿಂದ ದೂರವಾಗಿ ಬಿಜೆಪಿ ಸೇರಿದ ವೇಳೆಯಲ್ಲೇ ಹರ್ಷಿತ್ ಕೂಡ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಆದರೆ, ಈ ಬಗ್ಗೆ ಮಾಹಿತಿ ಇಲ್ಲದೇ ಯುವ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಅವರನ್ನು ಆಯ್ಕೆ ಮಾಡಲಾಗಿದೆ.
2018 ರಲ್ಲಿ ಯುವ ಕಾಂಗ್ರೆಸ್ ಸಮಿತಿ ಚುನಾವಣೆ ಘೋಷಣೆಯಾಗಿ ಹರ್ಷಿತ್ ನಾಮಪತ್ರ ಸಲ್ಲಿಸಿದ್ದರು. ಕಾರಣಾಂತರದಿಂದ ಅನೇಕ ಸಲ ಚುನಾವಣೆ ಮುಂದೂಡಿಕೆಯಾಗಿದೆ. ತಮ್ಮ ಹೆಸರು ಕೈಬಿಟ್ಟು ಉಮೇದುವಾರಿಕೆ ಪತ್ರ ತೆಗೆಯುವಂತೆ ಪಕ್ಷದ ನಾಯಕರಿಗೆ ಹರ್ಷಿತ್ ಮನವಿ ಮಾಡಿದ್ದಾರೆ. ಆದರೆ. ಇದನ್ನು ನಾಯಕರು ಗಮನಿಸಿರಲಿಲ್ಲ. ಶುಕ್ರವಾರ ನಡೆದ ಚುನಾವಣೆಯಲ್ಲಿ ಅವರನ್ನೇ ಆಯ್ಕೆ ಮಾಡಲಾಗಿದೆ. ಅಭಿನಂದನೆಗಳ ಕರೆಗಳು ಬರಲಾರಂಭಿಸಿದ ನಂತರ ಹರ್ಷಿತ್ ಗೆ ಈ ವಿಚಾರ ಗೊತ್ತಾಗಿದೆ ಎನ್ನಲಾಗಿದೆ.
ಯುವ ಕಾಂಗ್ರೆಸ್ ಸಮಿತಿ ಚುನಾವಣೆಯಲ್ಲಿ ಹರ್ಷಿತ್ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾದ ವಿಚಾರ ಗೊತ್ತಾಗಿ ಪಕ್ಷದ ನಾಯಕರು ಕ್ರಮಕೈಗೊಂಡಿದ್ದಾರೆ.