ನವದೆಹಲಿ: ಸಿಬಿಎಸ್ಇ ಮಂಡಳಿ 2021 ರ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿ ನಂತರ ನಡೆಸಲು ಶೀಘ್ರವೇ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಂಗಳವಾರ ದೇಶಾದ್ಯಂತ ಇರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ವೆಬಿನಾರ್ ಮೂಲಕ ಸಮಾಲೋಚನೆ ನಡೆಸಿದ್ದಾರೆ.
ಫೆಬ್ರವರಿ 2021 ರ ವರೆಗೆ ಪರೀಕ್ಷೆಗಳು ನಡೆಯುವುದಿಲ್ಲ. ಪರೀಕ್ಷೆಯನ್ನು ರದ್ದುಗೊಳಿಸುವುದು ಮುಖ್ಯವಲ್ಲ. ಪರೀಕ್ಷೆಗಳಿಲ್ಲದೇ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಮುಂದೆ ಭವಿಷ್ಯದಲ್ಲಿ ಉನ್ನತ ಶಿಕ್ಷಣ, ಉದ್ಯೋಗ ಮತ್ತು ಪ್ರವೇಶ ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪರೀಕ್ಷೆಗಳನ್ನು ನಡೆಸುವ ಕುರಿತಾಗಿ ಫೆಬ್ರವರಿ ನಂತರವೇ ನಿರ್ಧರಿಸಲಾಗುತ್ತದೆ. ಅನೇಕ ಸಿಬಿಎಸ್ಇ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿ ಇರುವ ಕಾರಣ ಆನ್ಲೈನ್ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆ ಫೆಬ್ರವರಿ ನಂತರ ನಡೆಯಲಿದ್ದು, ಶೀಘ್ರವೇ ದಿನಾಂಕಗಳನ್ನು ಪ್ರಕಟಿಸಲಾಗುವುದು. ಈಗಾಗಲೇ ಪಠ್ಯಕ್ರಮವನ್ನು ಕಡಿತ ಮಾಡಿದ್ದು, ಇದರ ಆಧಾರದ ಮೇಲೆ ಪರೀಕ್ಷೆ ನಡೆಯಲಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಯಾವುದೇ ಪ್ರಾಯೋಗಿಕ ಪರೀಕ್ಷೆಗಳು ನಡೆಯುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.