ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪೆಡ್ಲರ್ ವಿನಯ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಇದೀಗ ವಿನಯ್ ಕನ್ನಡ ಚಿತ್ರರಂಗದ ಖ್ಯಾತ ನಟಿಯೋರ್ವರ ಜೊತೆ ತನಗೆ ನಂಟಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಸಿಸಿಬಿ ವಿಚಾರಣೆ ವೇಳೆ ಬಂಧಿತ ಡ್ರಗ್ಸ್ ಪೆಡ್ಲರ್ ವಿನಯ್, ಸ್ಯಾಂಡಲ್ ವುಡ್ ನ ಖ್ಯಾತ ನಟಿಯೊಬ್ಬರ ಹೆಸರು ಹೇಳಿದ್ದು, ವಿನಯ್ ಮಾಹಿತಿ ಆಧರಿಸಿ ಆಕೆಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲು ಸಿಸಿಬಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಆರೋಪಿ ವಿನಯ್ ಜೊತೆ ನಟಿ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದರು. ಅಲ್ಲದೇ ಅಮೆರಿಕಾದ ಟ್ಯುಮರಿ ಲ್ಯಾಂಡ್ ಗೆ ಕೂಡ ಹೋಗಿದ್ದ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕಿದೆ. ಈ ಹಿನ್ನಲೆಯಲ್ಲಿ ವಿಚಾರಣೆಗಾಗಿ ನಟಿಗೆ ನೋಟೀಸ್ ನೀಡಲಿದೆ. ಒಟ್ಟಾರೆ ಡ್ರಗ್ಸ್ ಪ್ರಕರಣದ ವಿರುದ್ಧ ಸಿಸಿಬಿ ಸಮರ ಮುಂದುವರೆದಿದ್ದು, ಇದೀಗ ಸ್ಯಾಂಡಲ್ ವುಡ್ ನ ಮತ್ತೊರ್ವ ನಟಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.