ಕೋವಿಡ್-19 ಸೋಂಕಿನ ವಿರುದ್ಧ ಫೈಜರ್ ಬಯೋಟೆಕ್ ಅಭಿವೃದ್ದಿಪಡಿಸಿದ Pfizer-BioNTech Covid-19 ಲಸಿಕೆಯು ಇತ್ತೀಚೆಗೆ ಕಂಡು ಬಂದಿರುವ ಕೋವಿಡ್-19 ವೈರಾಣುವಿನ ಹೊಸ ಅವತರಣಿಕೆಯ ವಿರುದ್ಧ ರಕ್ಷಣೆ ಕೊಡತ್ತದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಐರೋಪ್ಯ ಒಕ್ಕೂಟ ತಿಳಿಸಿದೆ.
ಬ್ರಿಟನ್‌ನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿರುವ ಕೋವಿಡ್‌ನ ಈ ಹೊಸ ಅವತಾರ ಜನರಲ್ಲಿ ಭಾರೀ ಆತಂಕ ಸೃಷ್ಟಿ ಮಾಡಲು ಅವಕಾಶ ಕೊಟ್ಟಿದೆ. ಈ ಕಾರಣದಿಂದಾಗಿ ಬ್ರಿಟನ್‌ನೊಂದಿಗೆ ಜಗತ್ತಿನ ಅನೇಕ ದೇಶಗಳು ವ್ಯಾಪಾರ/ವಾಣಿಜ್ಯದ ವ್ಯವಹಾರಗಳನ್ನು ಬಂದ್ ಮಾಡಿಕೊಂಡಿವೆ.
ಕೋವಿಡ್-19ಗೆ ಅಮೆರಿಕದ ಫೈಜರ್ ಹಾಗೂ ಜರ್ಮನಿಯ ಬಯೋಎನ್‌ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಐರೋಪ್ಯ ಒಕ್ಕೂಟದ ವೈದ್ಯಕೀಯ ಪ್ರಾಧಿಕಾರ ಕೋವಿಡ್-19 ವಿರುದ್ಧ ಬಳಸಲು ಅನುಮತಿ ಕೊಟ್ಟ ಬೆನ್ನಿಗೇ ಈ ಬೆಳವಣಿಗೆ ಘಟಿಸಿದೆ.
ಕೋವಿಡ್-19 ಸೋಂಕಿನ ಕಾರಣದಿಂದಾಗಿ ಈವರೆಗೆ 4,70,000 ಐರೋಪ್ಯರು ಮೃತಪಟ್ಟಿದ್ದಾರೆ. ಚಳಿಗಾಲದಲ್ಲಿ ಸೋಂಕು ಇನ್ನಷ್ಟು ತೀವ್ರವಾಗಿ ಹಬ್ಬುತ್ತಿರುವ ಕಾರಣದಿಂದಾಗಿ ಸರ್ಕಾರಗಳು ಇನ್ನಷ್ಟು ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೆ ತರಲು ಮುಂದಾಗಿವೆ.
ಕೋವಿಡ್-19 ವಿರುದ್ಧ ಲಸಿಕೆ ಹಾಕಿಸಲು ಭಾರೀ ಪ್ರಮಾಣದಲ್ಲಿ ಸಿದ್ಧತೆಗಳನ್ನು ಐರೋಪ್ಯ ಒಕ್ಕೂಟದ ದೇಶಗಳು ಸಮರೋಪಾದಿಯಲ್ಲಿ ಮಾಡಿಕೊಳ್ಳುತ್ತಿದ್ದು, ವೈದ್ಯರು, ಪ್ಯಾರಾಮೆಡಿಕ್ಸ್, ಸೈನಿಕರು ಸೇರಿದಂತೆ ಅಪಾರ ಪ್ರಮಾಣದಲ್ಲಿ ಮಾನವ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಳ್ಳುತ್ತಿವೆ.