ನವದೆಹಲಿ: ರೈತರ ಖಾತೆಗೆ ನೇರ ನಗದು ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕ್ರಿಸ್ಮಸ್ ದಿನದಂದು 80 ಮಿಲಿಯನ್ ರೈತರಿಗೆ 18,000 ಕೋಟಿ ರೂಪಾಯಿ ಜಮಾ ಮಾಡಲಾಗುವುದು.
ಪ್ರಧಾನಿ ನರೇಂದ್ರ ಮೋದಿ ಹಣ ಪಾವತಿಗೆ ಚಾಲನೆ ನೀಡಲಿದ್ದಾರೆ. 2019 ರಲ್ಲಿ ಆರಂಭವಾದ ಯೋಜನೆಯಡಿ ವಾರ್ಷಿಕವಾಗಿ ರೈತರ ಖಾತೆಗೆ ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ 6 ಸಾವಿರ ರೂ. ಜಮಾ ಮಾಡಲಾಗುತ್ತದೆ.
ಈ ಬಾರಿ ಕ್ರಿಸ್ಮಸ್ ದಿನ ಹಣ ಪಾವತಿ ಮಾಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಅವರು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. 3 ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ರೈತರು ನಿರಂತರ ಪ್ರತಿಭಟನೆ ಕೈಗೊಂಡಿದ್ದು, ನೂತನ ಕೃಷಿ ನೀತಿಗಳಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
ಕ್ರಿಸ್ ಮಸ್ ದಿನ ರೈತರ ಖಾತೆಗೆ ಹಣ ಪಾವತಿಗೆ ಚಾಲನೆ ನೀಡಿ ಹೊಸ ಕೃಷಿ ಕಾನೂನುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ಮಾತನಾಡಲಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಯೋಜನೆ, ಎಪಿಎಂಸಿ ಸೇರಿದಂತೆ ಸರ್ಕಾರದ ಕಾರ್ಯವಿಧಾನಗಳು ಮುಂದುವರೆಯಲಿದೆ ಎಂದು ರೈತರಿಗೆ ಪ್ರಧಾನಿಯವರು ಮತ್ತೊಮ್ಮೆ ಭರವಸೆ ನೀಡಲಿದ್ದಾರೆ.