ಬೆಂಗಳೂರು: ಬೆಂಗಳೂರಿನ ಏರೊಸ್ಪೇಸ್ ಪಾರ್ಕ್, ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಸೇರಿದಂತೆ ಒಟ್ಟು 21,746 ಕೋಟಿ ರೂ. ಹೂಡಿಕೆಯ 3 ಯೋಜನೆಗಳಿಗೆ ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅನುಮತಿ ನೀಡಿದೆ.
ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 55 ನೇ ಸಭೆಯಲ್ಲಿ 3 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.
ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನ 36.5 ಎಕರೆಯಲ್ಲಿ 1152 ಕೋಟಿ ರೂ. ಹೂಡಿಕೆಯೊಂದಿಗೆ ಬೋಯಿಂಗ್ ಇಂಡಿಯಾ ಪ್ರೈ ಲಿ. ಎಲೆಕ್ಟ್ರಾನಿಕ್ ಏವಿಯಾನಿಕ್ಸ್ ಉತ್ಪಾದನೆ ಮತ್ತು ಜೋಡಣೆ ಮಾಡಲಿದೆ.
ಎಲೆಸ್ಟ್ ಪ್ರೈ ಲಿ. ಹುಬ್ಬಳ್ಳಿ, ಧಾರವಾಡದಲ್ಲಿ 85 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಘಟಕ ಆರಂಭಿಸಲಿದ್ದು, 14,255 ಕೋಟಿ ರೂ. ಹೂಡಿಕೆ ಮಾಡಲಿದ್ದು, ಇದರಿಂದ 867 ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ.
ಎಲೆಸ್ಟ್ ಪ್ರೈ. ಲಿ. ಹುಬ್ಬಳ್ಳಿ, ಧಾರವಾಡದಲ್ಲಿ 88 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕೆ ಅಗತ್ಯ ಇರುವ ಲಿಥಿಯಂ ಅಯಾನ್ ಸೆಲ್ ಮತ್ತು ಬ್ಯಾಟರಿ ಉತ್ಪಾದನೆ ಘಟಕ ಸ್ಥಾಪಿಸಲಿದ್ದು, 6339 ಕೋಟಿ ರೂ. ಹೂಡಿಕೆ ಮಾಡಲಿದೆ. ಇದರಿಂದ 1804 ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.