ಗ್ರಾಮ ಪಂಚಾಯ್ತಿ ಚುನಾವಣೆಯ ಕಾವು ಜೋರಾಗಿದೆ. ನಿನ್ನೆಯೇ ಬಹಿರಂಗ ಪ್ರಚಾರಕ್ಕೆ ಬ್ರೇಕ್ ಬಿದ್ದಿದೆ. ನಾಳೆ ಮೊದಲನೇ ಹಂತದ ಮತದಾನ ಇರಲಿದೆ. ಪ್ರಚಾರ ಕಾರ್ಯಗಳು ಕೂಡ ಭರದಿಂದ ಸಾಗಿದ್ದವು. ವಿಭಿನ್ನ ರೀತಿಯ ಪ್ರಚಾರ ಕಾರ್ಯಗಳನ್ನೂ ಕೂಡ ನೋಡಿದ್ದೆವು. ಈ ಸಾಲಿಗೆ ಇಲ್ಲೊಬ್ಬ ಯುವಕ ಸೇರ್ಪಡೆಯಾಗಿದ್ದಾರೆ.
ಹೌದು, ಚುನಾವಣೆ ಮುಗಿಯುವವರೆಗೂ ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಎಂಬ ಹರಕೆ ಹೊತ್ತ ಯುವಕನೊಬ್ಬ ವಿಭಿನ್ನವಾಗಿ ಮತಯಾಚನೆ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿ ನವೀನ್ ಎಂಬಾತ ಈ ರೀತಿಯ ಹರಕೆ ಹೊತ್ತು ಅದೇ ರೀತಿಯಲ್ಲಿಯೇ ಮತಯಾಚನೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಸೋದಿಕ್ಕೂ ಮೂರು ತಿಂಗಳ ಮುಂಚೆಯೇ ಈ ಯುವಕ ದೇವಸ್ಥಾನ ಒಂದಕ್ಕೆ ಹೋಗಿದ್ದರಂತೆ. ಅಲ್ಲಿ ಚುನಾವಣೆ ಮುಗಿಯುವವರೆಗೂ ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಹಾಗೂ ಚಪ್ಪಲಿ ಹಾಕದೆಯೇ ಚುನಾವಣಾ ಪ್ರಚಾರ ಮಾಡ್ತೇನೆ ಎಂದು ದೇವರ ಬಳಿ ಹರಕೆ ಮಾಡಿಕೊಂಡಿದ್ದರಂತೆ. ಅದರಂತೆ ಕಾಲಿಗೆ ಚಪ್ಪಲಿ ಹಾಕದೇ ಏಕಾಂಗಿಯಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಇನ್ನು ಇವರಿಗೆ ಚಪ್ಪಲಿ ಗುರುತೇ ಚಿನ್ಹೆಯಾಗಿ ಸಿಕ್ಕಿರೋದ್ರಿಂದ ಚಿಕ್ಕ ಚಪ್ಪಲಿಯನ್ನು ಸದಾ ತಮ್ಮ ಬ್ಯಾಗಿನ ಮೇಲೆ ಸಿಕ್ಕಿಸಿಕೊಂಡು ಮನೆ ಮನೆಗೆ ಹೋಗಿ ಪ್ರಚಾರ ಮಾಡಿದ್ದಾರೆ.