ಪಿಂಚಣಿದಾರರು ಪ್ರತಿವರ್ಷ ನವೆಂಬರ್ 1 ರಿಂದ 30ರ ಅವಧಿಯೊಳಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕಾಗಿದ್ದು, ಆದರೆ ಕೊರೊನಾ ಹಿನ್ನೆಲೆಯಲ್ಲಿ ಈ ಅವಧಿಯನ್ನು ಮುಂದಿನ ವರ್ಷದ ಫೆಬ್ರವರಿ 28 ರ ವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಸಿಬ್ಬಂದಿ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಹಿರಿಯ ನಾಗರಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದು, ಅವಧಿ ವಿಸ್ತರಣೆಯಿಂದ ಬ್ಯಾಂಕುಗಳಲ್ಲಿ ನೂಕುನುಗ್ಗಲು ಉಂಟಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಈ ವರ್ಷ ಅಂಚೆ ಪೇದೆಗಳ ಮುಖಾಂತರ ಸುಮಾರು 1.89 ಲಕ್ಷ ಡಿಜಿಟಲ್ ರೂಪದ ಜೀವಿತ ಪ್ರಮಾಣ ಪತ್ರವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಅವಧಿ ವಿಸ್ತರಣೆಯಾಗಿರುವುದರಿಂದ ಪಿಂಚಣಿದಾರರು ಈ ಮೊದಲಿನಂತೆ ಪಿಂಚಣಿ ಪಡೆಯಲಿದ್ದಾರೆ. ಆದರೆ 2021ರ ಫೆಬ್ರವರಿ 28ರೊಳಗೆ ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಈಗಾಗಲೇ ಅವಧಿ ವಿಸ್ತರಣೆ ಕುರಿತು ಪ್ರಕಟಣೆ ಹೊರಡಿಸಿದೆ.