ಕೆಲ ಶಾಸಕರು ಪದೇ ಪದೇ ನಾಯಕತ್ವ ಬದಲಾವಣೆ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಿದ್ದ ಕಾರಣ ಯಡಿಯೂರಪ್ಪನವರ ಪದಚ್ಯುತಿಯಾಗುವುದೇ ಎಂಬ ಗೊಂದಲಗಳಿಗೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ.
ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು ಇದರಿಂದಾಗಿ ಯಡಿಯೂರಪ್ಪನವರು ನಿರಾಳರಾದಂತಾಗಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈ ಮೊದಲೇ ಯಡಿಯೂರಪ್ಪನವರ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದು, ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಇದೇ ಇಂಗಿತ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಅಲ್ಲದೆ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪಿಸುತ್ತಿದ್ದ ಶಾಸಕರಿಗೂ ಹೈಕಮಾಂಡ್ ಬಿಸಿ ಮುಟ್ಟಿಸಿದೆ ಎನ್ನಲಾಗಿದ್ದು, ಇನ್ನು ಮುಂದೆ ಇಂತಹ ಪ್ರಸ್ತಾಪವನ್ನು ತಮ್ಮ ಮುಂದೆ ತರಬಾರದೆಂದು ತಾಕೀತು ಮಾಡಿದೆ ಎಂದು ಹೇಳಲಾಗಿದೆ.
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕರು ಯಾರೂ ಇಲ್ಲದ ಕಾರಣ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದ್ದು, ಒಂದೊಮ್ಮೆ ನಾಯಕತ್ವ ಬದಲಾವಣೆಗೆ ಮುಂದಾದರೆ ಮುಂಬರುವ ಚುನಾವಣೆಯನ್ನು ಎದುರಿಸುವುದು ಕಷ್ಟ ಎಂಬ ಕಾರಣಕ್ಕೆ ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನ ಅಬಾಧಿತ ಎನ್ನಲಾಗಿದೆ. ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ಹೊಸ ಉತ್ಸಾಹ ಪಡೆದುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಆಡಳಿತದಲ್ಲಿ ಚುರುಕು ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.