
ಹ್ಯಾಮಿಲ್ಟನ್ ನ ಸಿಡೊನ್ ಪಾರ್ಕ್‌ನಲ್ಲಿ ನ್ಯೂಜಿಲ್ಯಾಂಡ್ ಹಾಗೂ ಪಾಕಿಸ್ತಾನ ನಡುವಣ ನಡೆದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಶಾದಬ್ ಖಾನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಆರಂಭದಲ್ಲಿ ಹೈದರ್ ಅಲಿ 8ರನ್ ಗಳಿಸಿ ಟಿಮ್ ಸೌಥಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶಫಿಕ್ ಶೂನ್ಯಕ್ಕೆ ಔಟಾದರು. ನಂತರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 22ರನ್ ಗಳಿಸಿದ್ದು, ಟಿಮ್ ಸೌಥಿ ಬೌಲಿಂಗ್‌ನಲ್ಲಿ ಔಟಾದರು.
ಮೊಹಮ್ಮದ್ ಹಫೀಸ್ ಪಾಕಿಸ್ತಾನ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದು, 57 ಎಸೆತಗಳಲ್ಲಿ (99)ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು. ಒಟ್ಟಾರೆ ಪಾಕಿಸ್ತಾನ ತಂಡ 6 ವಿಕೆಟ್ ನಷ್ಟಕ್ಕೆ 163ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡದಲ್ಲಿ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 21ರನ್ ಗಳಿಸಿದ್ದು, ಫಹೀಮ್ ಅಶ್ರಫ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಟಿಮ್ ಸೈಫರ್ಟ್ 63 ಎಸೆತಗಳಲ್ಲಿ (84) ಹಾಗೂ ನಾಯಕ ಕೇನ್ ವಿಲಿಯಮ್ಸನ್ 42 ಎಸೆತಗಳಲ್ಲಿ (57) ಇವರ ಭರ್ಜರಿ ಜೊತೆಯಾಟದಿಂದ ನ್ಯೂಜಿಲ್ಯಾಂಡ್ ತಂಡ ಕೇವಲ 1 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.
ಈ ಮೂಲಕ ಪಾಕಿಸ್ತಾನದ ವಿರುದ್ದ ನ್ಯೂಜಿಲ್ಯಾಂಡ್ ತಂಡ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಮೂರು ಟಿ ಟ್ವೆಂಟಿ ಸರಣಿಯಲ್ಲಿ ನ್ಯೂಜಿಲ್ಯಾಂಡ್ ತಂಡ 2-0 ಮುನ್ನಡೆಯಲ್ಲಿದ್ದು ಸರಣಿ ಕೈವಶಮಾಡಿಕೊಂಡಿದೆ.