ಚೊಂಗ್ಜಿನ್: ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತದಲ್ಲಿರುವ ಉತ್ತರ ಕೋರಿಯಾದಲ್ಲಿ ವಿಚಿತ್ರ ಕಾಯ್ದೆಗಳು ಜಾರಿಯಲ್ಲಿವೆ. ಸಣ್ಣ ತಪ್ಪಿಗೂ ಭೀಕರ ಶಿಕ್ಷೆ ಸಿಗುತ್ತದೆ. ವಿದೇಶಿ ರೇಡಿಯೋ ಆಲಿಸಿದ ಎಂಬ ಕಾರಣಕ್ಕೆ ಅಲ್ಲಿನ ವ್ಯಕ್ತಿಯೊಬ್ಬನಿಗೆ ಮರಣದಂಡನೆ ನೀಡಲಾಗಿದೆ.
ಚೊಂಗ್ಜಿನ್ ನಗರದ ಮೀನುಗಾರ ಚೊಯ್ ಎಂಬ ವ್ಯಕ್ತಿಯನ್ನು ಅಕ್ಟೋಬರ್ ನಲ್ಲಿ 100 ಮೀನುಗಾರರ ಸಮ್ಮುಖದಲ್ಲಿ ಗುಂಡು ಹೊಡೆದು ಸಾಯಿಸಲಾಗಿದೆ ಎಂದು ಡೇಲಿ ಮೇಲ್ ವರದಿ ಮಾಡಿದೆ. ವಿದೇಶದ ರೇಡಿಯೋ ಆಲಿಸುವುದೂ ಉತ್ತರ ಕೋರಿಯಾದಲ್ಲಿ ಅಪರಾಧ.
40 ವರ್ಷ ವಯಸ್ಸಿನ ಚೊಯ್ ಸೇನೆಯಲ್ಲಿ ರೇಡಿಯೋಗ್ರಾಫರ್ ಆಗಿದ್ದಾಗಿಂದ ವಿದೇಶಿ ರೇಡಿಯೋ ಆಲಿಸುತ್ತಿದ್ದ. ಸೇನೆಯಿಂದ ನಿವೃತ್ತನಾಗಿ ಮೀನುಗಾರಿಕೆ ಪ್ರಾರಂಭಿಸಿದ. ಆಗಲೂ ತನ್ನ ಹಳೆ ಚಾಳಿ ಮುಂದುವರಿಸಿದ. ಸಮುದ್ರದಲ್ಲಿ ಹೋಗಿ ಫ್ರೀ ಏಷ್ಯಾ ಎಂಬ ವಿದೇಶಿ ರೇಡಿಯೋದಲ್ಲಿ ವಾರ್ತೆ ಕೇಳುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.