ಕೊರೊನಾ ವೈರಸ್ನಿಂದಾಗಿ ದೇಶದಲ್ಲಿ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ತುರ್ತು ಸೇವೆಗಳನ್ನ ಹೊರತುಪಡಿಸಿ ಮಿಕ್ಕೆಲ್ಲ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿತ್ತು.
ಇದೇ ರೀತಿ ಚಿಂತಾಮಣಿ ಸೋನಿ ಕೊಲ್ಕತ್ತಾದಲ್ಲಿರುವ ತಮ್ಮ ಅಂಗಡಿಯನ್ನ ಬಂದ್ ಮಾಡಿ ಹುಟ್ಟೂರು ಉತ್ತರ ಪ್ರದೇಶದ ಮಿರ್ಜಾಪುರಕ್ಕೆ ತೆರಳಿದ್ದರು. ಬರೋಬ್ಬರಿ 9 ತಿಂಗಳ ಬಳಿಕ ಅಂಗಡಿ ಪುನಾರಂಭ ಮಾಡಬೇಕೆಂದು ವಾಪಸ್ ಬಂದ ಚಿಂತಾಮಣಿ ತಾವು ಬಿಟ್ಟು ಹೋಗಿದ್ದ ಅಂಗಡಿಯನ್ನ ಕಂಡು ಶಾಕ್ ಆಗಿದ್ದಾರೆ.
ಡಿಸೆಂಬರ್ 15ರಂದು ಸೋನಿ ತಮ್ಮ ಮೊಬೈಲ್ ಹಾಗೂ ಸೈಕಲ್ ರಿಪೇರಿ ಅಂಗಡಿಯ ಬಾಗಿಲನ್ನ ತೆರೆದಾಗ ಅವರಿಗೆ ಬರ ಸಿಡಿಲೇ ಬಡಿದಂತಾಗಿತ್ತು. ಮಾರ್ಚ್ ತಿಂಗಳಲ್ಲಿ ಅವರು ಅಂಗಡಿಯಲ್ಲಿ ಬಿಟ್ಟು ಹೋಗಿದ್ದ ಬೆಲೆ ಬಾಳುವ ವಸ್ತುಗಳು ಹಾಗೂ ನಗದನ್ನ ಯಾರೋ ದುಷ್ಕರ್ಮಿಗಳು ಕದ್ದು ಪರಾರಿಯಾಗಿದ್ದರು. 1969ರಿಂದ ಇಲ್ಲಿ ಅಂಗಡಿ ನಡೆಸುತ್ತಿದ್ದ ಸೋನಿ ನಷ್ಟದ ಸುಳಿಗೆ ಸಿಲುಕಿದ್ದಾರೆ.
ನಾನು ಅಂಗಡಿಯನ್ನ ತೆರೆದು ನೋಡಿದಾಗ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಇಡೀ ಅಂಗಡಿಯನ್ನ ದರೋಡೆ ಮಾಡಲಾಗಿತ್ತು. ನನ್ನ ವಸ್ತುಗಳು ಹಾಗೂ ಹಣ ಕಾಣೆಯಾಗಿದೆ. ಹಣ ಕಳೆದುಕೊಂಡ ಬಗ್ಗೆ ನನಗೆ ಬೇಸರವಿದೆ. ಆದರೆ ಅಂಗಡಿಯ ಸ್ಥಿತಿಯನ್ನ ನೋಡಿ ಕಣ್ಣೀರು ಸುರಿಸಿದೆ ಅಂತಾ ಚಿಂತಾಮಣಿ ಸೋನಿ ಹೇಳಿದ್ದಾರೆ. ಈ ಸಂಬಂಧ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ