ಡಿ.15 ರಂದು ವಿಧಾನಪರಿಷತ್ ಕಲಾಪದಲ್ಲಿ ಹಿಂದೆಂದೂ ನಡೆಯದಂತಹ ದೊಡ್ಡ ಗಲಾಟೆ ನಡೆದು ಹೋಯ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಬುದ್ದಿವಂತರ ಕಲಾಪ ಎಂದೆನಿಸಿಕೊಂಡ ವಿಧಾನಪರಿಷತ್‌ನಲ್ಲಿ ಸದಸ್ಯರು ದಡ್ಡರಂತೆ ವರ್ತಿಸಿದ ರೀತಿ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಸಭಾಪತಿ ಪೀಠಕ್ಕೆ ಮರ್ಯಾದೆ ಇಲ್ಲದ ರೀತಿಯಲ್ಲಿ ವರ್ತನೆ ಮಾಡಿದ್ದನ್ನು ಇಡೀ ರಾಜ್ಯದ ಜನತೆ ನೋಡಿದ್ದಾರೆ. ಅಷ್ಟೆ ಅಲ್ಲ ಆ ಘಟನೆ ಸಂಬಂಧ ಜನಸಾಮಾನ್ಯರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಈ ಗಲಭೆಗೆ ಸಂಬಂಧಪಟ್ಟಂತೆ ವಿಧಾನಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ವಿಧಾನಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ. ಈ ನೋಟೀಸ್‌ನಲ್ಲಿ ಹಲವಾರು ಪ್ರಶ್ನೆಗಳನ್ನು ವಿಧಾನಪರಿಷತ್ ಕಾರ್ಯದರ್ಶಿಗೆ ಕೇಳಿದ್ದಾರೆ. ಅಲ್ಲದೆ ಈ ಪತ್ರದ ಮೂಲಕ ನೀವು 48 ಘಂಟೆಯೊಳಗೆ ಉತ್ತರ ಕೊಡಬೇಕು ಎಂದೂ ಹೇಳಿದ್ದಾರೆ.
ಪತ್ರದಲ್ಲಿ ಡಿ.15 ರಂದು ಪರಿಷತ್ ಕಲಾಪದಲ್ಲಿ ಗಲಭೆ ಆಗಿದ್ದು ಏಕೆ..? ಸಭಾಪತಿಗಳು ಬಂದು ಸ್ಥಾನ ಅಲಂಕರಿಸುವ ಮುನ್ನ ಸದನದ ಜವಾಬ್ದಾರಿ ನಿಮ್ಮದಾಗಿರುತ್ತೆ. ಸದನದಲ್ಲಿ ಕೋರಂ ಆಗುವವರೆಗೂ ಸಭಾಪತಿಗಳು ಬರುವುದಿಲ್ಲ. ಸಭಾಪತಿಗಳ ಆಸನದಲ್ಲಿ ಬೆಲ್ ಆಗುವಾಗ ಯಾರು ಕುಳಿತುಕೊಂಡಿರಬಾರದು. ಇದ್ಯಾವುದೂ ನಿಮ್ಮ ಗಮನಕ್ಕೆ ಬರಲಿಲ್ಲವೇ..? ಅಥವಾ ಇದು ನಿಮಗೆ ಗೊತ್ತಿಲ್ಲವೇ..? ವಿಧಾನಪರಿಷತ್ ಕಲಾಪದ ಲೈವ್ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನೀವು ಕೂಡ ಉಪ-ಸಭಾಪತಿಗಳು ಬಂದು ಸ್ಥಾನದಲ್ಲಿ ಕುಳಿತಾಗ ಅನುವು ಮಾಡಿಕೊಟ್ಟಿರಬಾರದೇಕೆ ಎಂಬ ಅನುಮಾನ ಇದೆ. ನಿಮಗೆ ಎಲ್ಲಾ ಗಮನಕ್ಕೆ ಬಂದಿದ್ದರೂ ಸುಮ್ಮನಿದ್ದಿದ್ದು ಏಕೆ..? ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ ಶತಮಾನದ ಇತಿಹಾಸವುಳ್ಳ ವಿಧಾನ ಪರಿಷತ್ತಿನ ಗೌರವ, ಸಂಪ್ರದಾಯ ಹಾಗೂ ಪರಂಪರೆಗೆ ಅಂದು ಸದನದಲ್ಲಿ ನಡೆದ ಘಟನೆಗಳಿಂದ ಧಕ್ಕೆಯಾಗಿರುತ್ತದೆ ಹಾಗಾಗಿ ಈ ಬಗ್ಗೆ ಉತ್ತರ ನೀಡಿ ಎಂದು ಹೇಳಿದ್ದಾರೆ.