ಇಷ್ಟು ದಿನ ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಧರ್ಮಾನುಸಾರ ವಿಚ್ಛೇದನ ನಿಯಮಗಳಿದ್ದವು. ಆಯಾಯ ಧರ್ಮ, ಲಿಂಗ ಆಧಾರಿತವಾಗಿ ತಾರತಮ್ಯವನ್ನು ನಿರ್ದಿಷ್ಟ ಧರ್ಮಕ್ಕೆ ಸೇರಿದ ಮಹಿಳೆಯರು ಅನುಭವಿಸುತ್ತಿದ್ದರು. ಇದನ್ನು ತಡೆಯೋದಿಕ್ಕೆ ಹಾಗೂ ಲಿಂಗ, ಜಾತಿ, ಧರ್ಮ ನಿರಪೇಕ್ಷಿತವಾದ ಸಮಾನ ಮಾನದಂಡ ಅನುಸರಿಸೋ ಬಗ್ಗೆ ಪರಿಶೀಲನೆ ಮಾಡಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ಹೌದು, ಆಯಾಯ ಧರ್ಮಕ್ಕನುಸಾರವಾಗಿ ವಿಭಿನ್ನವಾಗಿರುವ ವಿಚ್ಛೇದನ ನಿಯಮಗಳು ಇರೋದ್ರಿಂದ ಸಂವಿಧಾನದ ಸಮಾನತೆಯ ಹಕ್ಕು ಹಾಗೂ ತಾರತಮ್ಯ ಪ್ರತಿರೋಧ ಹಕ್ಕಿಗೆ ಧಕ್ಕೆಯಾಗುತ್ತಿದೆ. ಹಾಗಾಗಿ ಇದನ್ನು ಸರಿಪಡಿಸಬೇಕಾದ ಅನಿವಾರ್ಯತೆ ಇದೆ ಅಂತಾ ವಕೀಲ ಎ.ಕೆ. ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ. ಅಷ್ಟೆ ಅಲ್ಲ ಸಮಾನ ವಿಚ್ಛೇದನ ನಿಯಮ ರೂಪಿಸಬೇಕು ಅಂತಲೂ ಮನವಿ ನೀಡಿದ್ದಾರೆ.
ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದೆ. ವಿಚಾರಣೆಯ ನಂತರ ಸಮಾನ ಮಾನದಂಡ ಅನುಸರಿಸಲು ಸಾಧ್ಯವಾಗುತ್ತದೆಯಾ ಹಾಗೂ ಇದರ ಸಾಧಕ ಬಾಧಕಗಳೇನು ಅನ್ನೋದರ ಬಗ್ಗೆ ಸಂಪೂರ್ಣ ವಿವರವನ್ನು ಮೂರು ತಿಂಗಳಲ್ಲಿ ತಿಳಿಸುವಂತೆ ಕಾನೂನು ಆಯೋಗಕ್ಕೆ ಸೂಚನೆ ನೀಡಿದೆ ಸುಪ್ರೀಂ ಕೋರ್ಟ್.