ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದ ನಾಲೆಯಲ್ಲಿ ಪತ್ತೆಯಾಗಿದ್ದ ಮೃತದೇಹದ ಕೊಲೆ ರಹಸ್ಯ ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಪರಿಚಿತ ಶವ ದೊರೆತ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡ ಪೊಲೀಸರು ಮೃತ ವ್ಯಕ್ತಿಯ ಪತ್ನಿ, ಆಕೆಯ ಪ್ರಿಯಕರ ಮತ್ತು ಕೊಲೆಗೆ ಸಹಕಾರ ನೀಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸರಗೂರು ಅಡ್ಡಹಳ್ಳಿ ಗ್ರಾಮದ ಶಿವರಾಜ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ.
ಶಿವರಾಜ್ ದಂಪತಿಗೆ ಮದುವೆಯಾಗಿ 15 ವರ್ಷಗಳಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಜಮೀನು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಚಿಕ್ಕೋಡಿ ಗ್ರಾಮದ ಆಟೋಚಾಲಕನ ಜೊತೆಗೆ ಶಿವರಾಜ್ ಪತ್ನಿಗೆ ಗೆಳೆತನವಾಗಿ ಅಕ್ರಮ ಸಂಬಂಧಕ್ಕೆ ತಿರುಗಿದೆ. ಈ ವಿಚಾರ ತಿಳಿದ ಶಿವರಾಜ್ ಗೆ ಗೊತ್ತಾಗಿದ್ದು, ಪತ್ನಿಗೆ ಕೆಲಸಕ್ಕೆ ಹೋಗದಂತೆ ತಿಳಿಸಿದ್ದಾನೆ.
ಇದರಿಂದ ಆಕ್ರೋಶಗೊಂಡ ಪತ್ನಿ ಪ್ರಿಯಕರನಿಗೆ ವಿಷಯ ತಿಳಿಸಿದ್ದು, ಆತನ ಸಂಚಿನಂತೆ ಶಿವರಾಜ್ ಗೆ ಮದ್ಯ ಕುಡಿಸಿ ಅಮಲಿನಲ್ಲಿದ್ದ ಸಂದರ್ಭದಲ್ಲಿ ಕೈಕಾಲು ಕಟ್ಟಿ ಕಪ್ಪಸೋಗೆ ಗ್ರಾಮದ ನಾಲೆಗೆ ಡಿಸೆಂಬರ್ 7 ರಂದು ಎಸೆದಿದ್ದಾರೆ. ಇದಕ್ಕೆ ಆಟೋಚಾಲಕನ ಸ್ನೇಹಿತನ ಸಹಕಾರ ಪಡೆದುಕೊಂಡಿದ್ದಾರೆ. ಪತ್ನಿ ಗಂಡ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿರಲಿಲ್ಲ. ಡಿಸೆಂಬರ್ 15 ರಂದು ಅಪರಿಚಿತ ಶವ ಪತ್ತೆಯಾದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆ ರಹಸ್ಯ ಗೊತ್ತಾಗಿದೆ. ಶಿವರಾಜ್ ನ ಪತ್ನಿ, ಆಕೆಯ ಪ್ರಿಯಕರ ಮತ್ತು ಸಹಕಾರ ನೀಡಿದ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.