ಮದುವೆ ದಿನದಂದು ದಿಬ್ಬಣ ತೆಗೆದುಕೊಂಡ ಮದುಮಗನೊಬ್ಬ ಮದುಮಗಳ ಮನೆಯ ವಿಳಾಸವೇ ಸಿಗದ ಕಾರಣ ಮನೆಗೆ ವಾಪಸ್ಸಾದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಡಿಸೆಂಬರ್ 10ರ ರಾತ್ರಿ ನಿಗದಿಯಾಗಿದ್ದ ವಿವಾಹಕ್ಕೆ ಗಂಡಿನ ಕಡೆಯವರು ದಿಬ್ಬಣ ಸಮೇತ ಹೋಗಿದ್ದಾರೆ. ಆದರೆ ವಧು ಮನೆಯವರು ನೀಡಿದ ವಿಳಾಸದಲ್ಲಿ ಯಾರೂ ಸಿಗದ ಕಾರಣ ಗಂಡಿನ ಕಡೆಯವರು ಕಂಗಾಲಾಗಿದ್ದಾರೆ.
ಮದುವೆ ಮೆರವಣಿಗೆ ಸಮೇತ ಊರೆಲ್ಲ ತಿರುಗಿದ ಗಂಡಿನ ಕಡೆಯವರು ಮಧ್ಯರಾತ್ರಿಯವರೆಗೂ ಹುಡುಗಿ ಮನೆಯವರಿಗಾಗಿ ಹುಡುಕಾಟ ನಡೆಸಿದ್ದಾರೆ. ಬೀದಿ ಬೀದಿ ಅಲೆದು ಕೋಪಗೊಂಡ ಮದುಮಗ ಕೋಪದಿಂದ ದಿಬ್ಬಣದ ಸಮೇತ ಮನೆಗೆ ವಾಪಸ್ಸಾಗಿದ್ದಾನೆ.
ಈ ಘಟನೆ ಬಳಿಕ ಮದುವೆ ಸಂಬಂಧ ಜೋಡಿಸಿದ್ದ ಮಧ್ಯವರ್ತಿ ಮಹಿಳೆ ಮೇಲೆ ಕೋಪಗೊಂಡ ವರನ ಕುಟುಂಬಸ್ಥರು ಮಹಿಳೆಯನ್ನ ಒತ್ತೆಯಾಳಾಗಿಸಿದ್ದಾರೆ. ಈ ಸಂಬಂಧ ಕೊಟ್ಟಾಲಿ ಪೊಲೀಸ್ ಠಾಣೆಯಲ್ಲಿ ಹೈಡ್ರಾಮವೇ ನಡೆದಿದೆ.
ಮೊದಲ ಮದುವೆಯಿಂದ ವಿಚ್ಚೇದನ ಪಡೆದಿದ್ದ ವರ ಈಗ ಕಾಣೆಯಾಗಿರುವ ಯುವತಿ ಜೊತೆ ಎರಡನೇ ಮದುವೆ ನಿಗದಿ ಮಾಡಿಕೊಂಡಿದ್ದನು. ಈ ಮದುವೆಗಾಗಿ ವಧುವಿನ ಕುಟುಂಬಸ್ಥರು 20 ಸಾವಿರ ರೂಪಾಯಿಯನ್ನೂ ಪಡೆದಿದ್ದಾರೆ.
ಇದೀಗ ವಧುವಿನ ಕುಟುಂಬವೇ ಕಾಣೆಯಾದ ಕಾರಣ ಕೊಟ್ವಾಲಿ ಠಾಣೆಯಲ್ಲಿ ವರನ ಕುಟುಂಬಸ್ಥರು ಮಧ್ಯವರ್ತಿ ಮಹಿಳೆ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದ್ದಾರೆ. ಆದರೆ ಸಾಕಷ್ಟು ವಾದ – ಪ್ರತಿವಾದದ ಬಳಿಕ ವರನ ಕುಟುಂಬಸ್ಥರು ಕೇಸ್ ದಾಖಲಿಸದೇ ಮಾತುಕತೆ ಮೂಲಕ ಈ ಗೊಂದಲ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ.