ಬೆಂಗಳೂರು: ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕ ಹಾಗೂ ಸಮಾಜಮುಖಿ ಚಿಂತಕ ಮತ್ತು ದಾನಿ, ಆರ್.ಎನ್. ಶೆಟ್ಟಿ(92) ಗುರುವಾರ ಡಿ.17 ರ ನಸುಕಿನ 2 ಗಂಟೆ ಸುಮಾರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಉತ್ತರ ಹಳ್ಳಿಯ ಆರ್.ಎನ್. ಎಸ್. ತಾಂತ್ರಿಕ ವಿದ್ಯಾಲಯ ಕಾಲೇಜು ಆವರಣದಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಇಡಲಾಗುವುದು, ಅಂತ್ಯಸಂಸ್ಕಾರ ಸಂಜೆ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಪುಣ್ಯ ಕ್ಷೇತ್ರ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15 ರಂದು ಜನಿಸಿದ ಆರ್.ಎನ್. ಶೆಟ್ಟಿ ಅವರು ರಾಜ್ಯದ ಮತ್ತು ದೇಶದ ಪ್ರಗತಿಗೆ ತಮ್ಮದೇ ಕೊಡುಗೆ ನೀಡಿದ್ದ ಹೆಸರಾಂತ ಉದ್ಯಮಿಯಾಗಿದ್ದರು.
ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ, ಔದ್ಯಮಿಕ, ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲಸೌಕರ್ಯ, ವಿದ್ಯುತ್ ಹಾಗೂ ನೀರಾವರಿ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ಆರ್.ಎನ್. ಶೆಟ್ಟಿ ಅವರು ಛಾಪು ಮೂಡಿಸಿದ್ದಾರೆ.
1961 ರಲ್ಲಿ ಮೂಲಸೌಕರ್ಯ ಕಂಪನಿ ಹುಟ್ಟು ಹಾಕಿದ ಆರ್.ಎನ್. ಶೆಟ್ಟಿ ಅವರು, ಹಿಡಕಲ್ ಜಲಾಶಯ, ತಟ್ಟಿಹಳ್ಳ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ ಜಲಾಶಯ, ಮಾಣಿ ಅಣೆಕಟ್ಟೆ, ವಾರಾಹಿ ಜಲ ವಿದ್ಯುತ್ ಯೋಜನೆ, ಕೆ.ಎಲ್.ಇ. ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಕೊಂಕಣ ರೈಲು ಸುರಂಗ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವೇ ಮೊದಲಾದ ಹತ್ತು ಹಲವು ಮಹತ್ವದ ಜನೋಪಯೋಗಿ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸಾಧನೆ ಮಾಡಿದ್ದಾರೆ.
ಬಾಲ್ಯದಿಂದಲೇ ತಾವು ನಂಬಿದ, ನಿತ್ಯ ಪೂಜಿಸುತ್ತಿದ್ದ ಮುರುಡೇಶ್ವರದ ಪುರಾತನ ಶಿವ ದೇವಾಲಯದ ನವೀಕರಣ ಕೈಂಕರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ ಅವರು, 249 ಅಡಿ ಎತ್ತರದ ಭವ್ಯ ಗೋಪುರ ಮತ್ತು ಬೆಟ್ಟದ ಮೇಲೆ 123 ಅಡಿ ಎತ್ತರದ ಭವ್ಯ ಶಿವನ ಮೂರ್ತಿಯನ್ನು ಸ್ಥಾಪಿಸುವ ಮೂಲಕ ಮುರುಡೇಶ್ವರವನ್ನು ಒಂದು ಪವಿತ್ರ ಪುಣ್ಯತಾಣ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿಯೂ ಪರಿವರ್ತಿಸಿದ್ದಾರೆ.
ಆರ್.ಎನ್.ಶೆಟ್ಟಿ ಟ್ರಸ್ಟ್ ವತಿಯಿಂದ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣದವರೆಗೆ ವಿದ್ಯಾದಾನ ಮಾಡುತ್ತಿದ್ದಾರೆ. ಆರ್.ಎನ್.ಎಸ್. ಅವರ ಈ ಎಲ್ಲ ಮಹತ್ವಾಕಾಂಕ್ಷೆಯ ಸತ್ಕಾರ್ಯಗಳಿಗೆ ಅವರ ಕುಟುಂಬದ ಸದಸ್ಯರೆಲ್ಲರೂ ಒತ್ತಾಸೆಯಾಗಿ ನಿಂತಿದ್ದರು. ಇವರ ಈ ಅಸಾಧಾರಣ ಸೇವೆಗೆ ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾಸಿಯಾದ ಕೈಗಾರಿಕಾ ರತ್ನ ಪ್ರಶಸ್ತಿಯೇ ಮೊದಲಾದ ಹತ್ತು ಹಲವು ಗೌರವಗಳು ಸಂದಿವೆ.
ಸಮಾಜದ ಒಳಿತಿಗಾಗಿ ಕಂಡ ಕನಸುಗಳನ್ನು ನನಸು ಮಾಡಿದ ಸಾಧಕ, ಅಸಾಧ್ಯವಾದುದನ್ನೂ ಸಾಧಿಸಿ ತೋರಿಸಿದ ಸಮಾಜಮುಖಿ ಚಿಂತಕ ಆರ್.ಎನ್. ಶೆಟ್ಟಿ ಅವರು ಇತ್ತೀಚೆಗಷ್ಟೇ ಕೋವಿಡ್ ಸಂದರ್ಭದಲ್ಲಿ ಪಿಎಂ ಕೇರ್ಸ್ ಗೆ 2.4 ಕೋಟಿ ರೂಪಾಯಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ 5 ಲಕ್ಷ ರೂಪಾಯಿ ಸೇರಿ ಒಟ್ಟು 3 ಕೋಟಿ 9 ಲಕ್ಷ ರೂ. ದೇಣಿಗೆ ನೀಡಿದ್ದರು.
ಮುಖ್ಯಮಂತ್ರಿ ಸಂತಾಪ:
ನಾಡಿನ ಖ್ಯಾತ ಉದ್ಯಮಿ ಆರ್.ಎನ್. ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೃಷಿಕ ಮನೆತನದಲ್ಲಿ ಜನಿಸಿ, ಉದ್ಯಮದತ್ತ ಮುಖ ಮಾಡಿದ ಆರ್.ಎನ್. ಶೆಟ್ಟಿ ಅವರು ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೋಟೆಲ್ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಶಿಕ್ಷಣ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದರು.
ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.