ಬೆಂಗಳೂರು: ರಾಜ್ಯದಲ್ಲಿ ಜನವರಿ 1 ರಿಂದ ಪರಿಷ್ಕೃತ ವಿದ್ಯಾಗಮ ಯೋಜನೆ ಪುನರಾರಂಭವಾಗಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿದ್ಯಾಗಮ ಯೋಜನೆ ಪುನಾರಂಭ ಮಾಡುವ ಬಗ್ಗೆ ಇಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಆಗಸ್ಟ್ 8 ರಿಂದ ಆರಂಭಿಸಲಾಗಿದ್ದ ವಿದ್ಯಾಗಮ ಯೋಜನೆಯನ್ನು ಅಕ್ಟೋಬರ್ 10 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸುರಕ್ಷತಾ ಕ್ರಮಗಳೊಂದಿಗೆ ಹೊಸರೀತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು.
ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ಯೋಜನೆ ಆರಂಭವಾಗಲಿದೆ. ಪ್ರಸ್ತುತ ಇರುವ ಆನ್ಲೈನ್, ಚಂದನ ವಾಹಿನಿಯ ಪಾಠಗಳು ಮುಂದುವರೆಯಲಿದೆ. ಅರ್ಧ ದಿನ ಮಕ್ಕಳು ಮಾಸ್ಕ್ ಧರಿಸಿ ಬಂದು ಸಾಮಾಜಿಕ ಅಂತರದೊಂದಿಗೆ ಕುಳಿತುಕೊಂಡು ಪಾಠ ಕಲಿಯಬಹುದಾಗಿದೆ. ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿರುತ್ತದೆ.