ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ 1971ರ ಯುದ್ಧಕ್ಕೆ 50 ವರ್ಷಗಳಾಗಿದ್ದು, ಬಾಂಗ್ಲಾ ವಿಮೋಚನೆಗೆ ಕಾರಣವಾದ ಯುದ್ಧದ ಗೆಲುವಿನ ಹಿನ್ನಲೆಯಲ್ಲಿ ವಿಜಯ್ ದಿವಸ್ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವರ್ಣಿಮ್ ವಿಜಯ್ ಮಾಷಲ್ ಜ್ಯೋತಿಯನ್ನು ಬೆಳಗುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಇದೇ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವರ್ಣಿಮ್ ವಿಜಯ ದಿವಸ ಲಾಂಛನವನ್ನು ಬಿಡುಗಡೆ ಮಾಡಿದರು.
ಪಾಕಿಸ್ತಾನದ ಭಾಗವಾಗಿದ್ದ ಬಾಂಗ್ಲಾ ವಿಮೋಚನೆಗಾಗಿ 1971ರ ಡಿಸೆಂಬರ್ 3ರಂದು ಭಾರತ ಪಾಕ್ ವಿರುದ್ಧ ಸಮರಕ್ಕೆ ಸಜ್ಜಾಯಿತು. 13 ದಿನಗಳ ಕಾಲ ನಡೆದ ಉಭಯ ದೇಶಗಳ ಯುದ್ಧದಲ್ಲಿ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು. 1971ರ ಡಿಸೆಂಬರ್ 16ರಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಎ.ಎ.ಖಾನ್ ನಿಯಾಜಿ ಸೇರಿದಂತೆ 93 ಸಾವಿರ ಸೈನಿಕರು ಭಾರತೀಯ ಸೇನೆಗೆ ಶರಣಾಗಿದ್ದರು. ಈ ಯುದ್ಧದ ಗೆಲುವಿನೊಂದಿಗೆ ಬಾಂಗ್ಲಾದೇಶ ಉದಯವಾಯಿತು. ಈ ಹಿನ್ನೆಲೆಯಲ್ಲಿ ಇಂದು ವಿಜಯ್ ದಿವಸ್ ಆಚರಿಸಲಾಗುತ್ತಿದೆ.