ಬೆಂಗಳೂರು: ರವಿಶಂಕರ್ ಗೌಡ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ ಮೊದಲಾದವರು ಅಭಿನಯದ ‘ಪುರು ಸೋತ್ ರಾಮ’ ಸಿನಿಮಾವನ್ನು ಪೈರಸಿ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ಚಿತ್ರದ ನಿರ್ಮಾಪಕರು ದೂರು ನೀಡಿದ್ದಾರೆ.
ಯೂಟ್ಯೂಬ್ ಮತ್ತು ಟೆಲಿಗ್ರಾಮ್ ನಲ್ಲಿ ಕಾನೂನುಬಾಹಿರವಾಗಿ ‘ಪುರು ಸೋತ್ ರಾಮ’ ಚಿತ್ರವನ್ನು ಅಪ್ಲೋಡ್ ಮಾಡಲಾಗಿದೆ ಎಂದು ನಿರ್ಮಾಪಕರು ದೂರಿದ್ದಾರೆ. ಕಳೆದ ಫೆಬ್ರವರಿಯಲ್ಲೇ ‘ಪುರು ಸೋತ್ ರಾಮ’ ಬಿಡುಗಡೆಗೆ ಸೆನ್ಸಾರ್ ಮಂಡಳಿಯಿಂದ ಒಪ್ಪಿಗೆ ಪಡೆಯಲಾಗಿತ್ತು. ಕೊರೋನಾ ಲಾಕ್ ಡೌನ್ ಕಾರಣದಿಂದ ಬಿಡುಗಡೆ ತಡವಾಗಿ ಡಿಸೆಂಬರ್ 11 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಂಡಿದೆ.
ಆದರೆ, ಕೆಲವು ಕಿಡಿಗೇಡಿಗಳು ಯೂಟ್ಯೂಬ್ ಮತ್ತು ಟೆಲಿಗ್ರಾಮ್ ನಲ್ಲಿ ಚಿತ್ರದ ಲಿಂಕ್ ಹರಿಬಿಟ್ಟಿದ್ದು, ಇದರಿಂದ ಭಾರಿ ನಷ್ಟವಾಗಿದೆ. ಪೈರಸಿ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ‘ಪುರು ಸೋತ್ ರಾಮ’ ನಿರ್ಮಾಪಕರು ದೂರು ನೀಡಿದ್ದಾರೆ.