ಬೆಂಗಳೂರು: ಉಪಸಭಾಪತಿಯನ್ನು ಎಳೆದಾಡಿದ ಪ್ರಕರಣ ದೇಶದ ಇತಿಹಾಸದಲ್ಲೇ ಮೊದಲು. ಇದು ಕಾಂಗ್ರೆಸ್ ನವರ ಸಂಸ್ಕೃತಿಯನ್ನು ತೋರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಪರಿಷತ್ ನಲ್ಲಿ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದರು. ಹಾಲಿ ಸಭಾಪತಿಗೆ ಜೆಡಿಎಸ್ ಬೆಂಬಲವಿಲ್ಲ. ಜೆಡಿಎಸ್ ಬಹಿರಂಗವಾಗಿ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಿದೆ. ಹೀಗಾಗಿ ಕಾಂಗ್ರೆಸ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು. ನಾವು ಉಪಸಭಾಪತಿಯನ್ನು ಕೂರಿಸುವುದಾಗಿ ನಿನ್ನೆಯೇ ಬಹಿರಂಗಪಡಿಸಿದ್ದೇವೆ. ಆದರೂ ಉಪಸಭಾಪತಿಯವರನ್ನು ಕಾಂಗ್ರೆಸ್ ಸದಸ್ಯರು ಎಳೆದಾಡಿರುವುದು ಖಂಡನೀಯ. ಮೊದಲು ಸಭಾತಿಯವರು ರಾಜೀನಾಮೆ ಬಿಸಾಕಲು ಕಾಂಗ್ರೆಸ್ ನವರು ಹೇಳಲಿ ಎಂದು ಗುಡುಗಿದರು.
ಹಾಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಒಮ್ಮೆ ನೋಟೀಸ್ ನೀಡಿದರೆ ಸಭಾಪತಿಗೆ ಆ ಸ್ಥಾನದಲ್ಲಿ ಕೂರಲು ಅರ್ಹತೆ ಇಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲೂ ತೀರ್ಮಾನವಿದೆ, ಇಡೀ ಜಗತ್ತಿಗೆ ಗೊತ್ತಿರುವ ವಿಷಯ. ಬೆಲ್ ಆದ ಮೇಲೆ ಬಂದರು, ಮೊದಲು ಬಂದರು ಎಂಬುದು ಮುಖ್ಯವಲ್ಲ, ಬಹುಮತವಿಲ್ಲ ಎಂಬುದು ಮುಖ್ಯ. ಪರಿಷತ್ ನಲ್ಲಿ ಕಾಂಗ್ರೆಸ್ ಮಾಡಿರುವ ಗಲಾಟೆ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ನಿಯೋಗದೊಂದಿಗೆ ತೆರಳಿ ರಾಜ್ಯಪಾಲರಿಗೆ ದೂರು ನೀಡಲಿದ್ದಾರೆ ಎಂದು ಹೇಳಿದರು.