ಮುಖದಲ್ಲಿ ಮೊಡವೆ ಕಾಣಿಸಿಕೊಂಡಿದೆಯೇ…? ನಾಳೆಯೇ ಮುಖ್ಯವಾದ ಕಾರ್ಯಕ್ರಮ-ಮೀಟಿಂಗ್ ಇದೆಯೇ…? ಹಾಗಾದರೆ ಹಲವು ಬಗೆಯ ಕ್ರೀಮ್ ಗಳನ್ನು ಹಚ್ಚಿಕೊಂಡು ತ್ವಚೆ ಹಾಳು ಮಾಡಿಕೊಳ್ಳುವ ಬದಲು ಒಂದೇ ರಾತ್ರಿ ಬೆಳಗಿನೊಳಗೆ ಮೊಡವೆ ತೆಗೆಯುವ ಸಿಂಪಲ್ ಟ್ರಿಕ್ಸ್ ತಿಳಿಯೋಣ.
ರಾತ್ರಿ ಮಲಗುವ ಮುನ್ನ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಮೊಡವೆ ಮೂಡಿದ ಜಾಗಕ್ಕೆ ನೀವು ಹಲ್ಲುಜ್ಜುವ ಪೇಸ್ಟ್ ಹಚ್ಚಿ. ಮೊಡವೆಯನ್ನು ಸಂಪೂರ್ಣವಾಗಿ ಮುಚ್ಚುವಷ್ಟು ಪ್ರಮಾಣದ ಪೇಸ್ಟ್ ಅಂಟಿಸಿ. ಮರುದಿನ ಬೆಳಗೆದ್ದು ನೋಡಿದರೆ ಆ ಜಾಗದ ಮೊಡವೆ ಅರ್ಧಕ್ಕಿಂತಲೂ ಸಣ್ಣದಾಗಿರುತ್ತದೆ.
ಆದರೆ ಇದನ್ನು ನಿತ್ಯ ಬಳಸುವುದು ಒಳ್ಳೆಯದಲ್ಲ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಿ. ನಿತ್ಯ ಬಳಸಿದರೆ ತ್ವಚೆಗೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು.
ಲಿಂಬೆರಸಕ್ಕೆ ಜೇನು ಬೆರೆಸಿ ಮೊಡವೆ ಮೂಡಿದ ಜಾಗದಲ್ಲಿ ಹಚ್ಚಿ. ಒಣಗುತ್ತಿದ್ದಂತೆ ಮತ್ತೆ ಮತ್ತೆ ಹಚ್ಚಿ. ಇದರಿಂದ ಒಂದೆರಡು ದಿನಗಳಲ್ಲೇ ಮೊಡವೆ ಇಲ್ಲವಾಗುತ್ತದೆ.
ಅಡುಗೆ ಸೋಡಾವೂ ಮೊಡವೆ ನಿವಾರಣೆಗೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಅದಕ್ಕೆ ತುಸು ನೀರು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿ ಮೊಡವೆ ಮೇಲೆ ಹಚ್ಚಿ. ರಾತ್ರಿ ಹೀಗೆ ಮಾಡಿಕೊಂಡು ಬೆಳಿಗ್ಗೆ ಮುಖ ತೊಳೆಯಿರಿ. ಇದರಿಂದಲೂ ಒಂದೆರಡು ದಿನಗಳಲ್ಲಿ ಮೊಡವೆ ಸಮಸ್ಯೆ ದೂರವಾಗುತ್ತದೆ.