ವಿಶ್ವದ ಜನತೆ ಇಂದು 2020ರ ಕೊನೆಯ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದ್ದಾರೆ. ಆದರೆ ಈ ವಿಶೇಷ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗೋದಿಲ್ಲ. ಆದರೆ ಈ ಈ ಗ್ರಹಣದ ವಿದ್ಯಮಾನವನ್ನ ನೀವು ಮನೆಯಲ್ಲೇ ಕುಳಿತು ವೀಕ್ಷಿಸಬಹುದಾಗಿದೆ.
ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆ 4ನಿಮಿಷಕ್ಕೆ ಭಾಗಶಃ ಗ್ರಹಣ ಆರಂಭವಾಗಲಿದೆ. ಪೂರ್ಣ ಪ್ರಮಾಣದ ಗ್ರಹಣ 8 ಗಂಟೆ 2 ನಿಮಿಷಕ್ಕೆ ಗೋಚರಿಸಲಿದೆ. ರಾತ್ರಿ 9:43ರ ಸುಮಾರಿಗೆ ಪೂರ್ಣ ಪ್ರಮಾಣಕ್ಕೆ ತಲುಪಿ ಮಧ್ಯರಾತ್ರಿ 12 ಗಂಟೆ 23 ನಿಮಿಷಕ್ಕೆ ಅಂತ್ಯಗೊಳ್ಳಲಿದೆ ಎಂದು ತಜ್ಞರು ಹೇಳಿದ್ದಾರೆ.
ಈ ವರ್ಷದ ಕೊನೆಯ ಗ್ರಹಣವು ಪೂರ್ಣ ಪ್ರಮಾಣದಲ್ಲಿ ದಕ್ಷಿಣ ಅಮೆರಿಕದ ಚಿಲಿ, ಅರ್ಜೆಂಟೀನಾದ ಟೆಮುಕೋ, ವಿಲರಿಕಾ, ಸಿಯೆರಾ ಕೊಲರಾಡೋ ನಗರಗಳಲ್ಲಿ , ಅಟ್ಲಾಂಟಿಕ್ ಹಾಗೂ ಹಿಂದೂ ಮಹಾಸಾಗರದ ಕೆಲ ಭಾಗಗಳಲ್ಲಿ ಕಾಣಿಸಲಿದೆ.
ಇನ್ನು ಸೂರ್ಯಗ್ರಹಣವನ್ನ ಬರಿಗಣ್ಣಿನಿಂದ ನೋಡೋದ್ರಿಂದ ಅಪಾಯ ಇರೋದ್ರಿಂದ ಎಕ್ಲಿಪ್ಸ್ ಗ್ಲಾಸ್ಗಳನ್ನ ಬಳಸುವಂತೆ ನಾಸಾ ಸಲಹೆ ನೀಡಿದೆ. ಅಮೆರಿಕನ್ ಆಟೋಮೊಬೈಲ್ ಅಸೋಸಿಯೇಷನ್ ಪ್ರಕಾರ ಈ ವಿದ್ಯಮಾನದ ಸಮಯದಲ್ಲಿ ವಾಹನ ಚಲಾವಣೆ ಮಾಡೋದು ಕೂಡ ಅಪಾಯವಂತೆ. ಅನಿವಾರ್ಯ ಕಾರಣಕ್ಕೆ ಗ್ರಹಣ ಕಾಲದಲ್ಲಿ ವಾಹನ ಚಲಾವಣೆ ಮಾಡುವವರು ಹೆಡ್ಲೈಟ್ ಆನ್ ಇಡಿ ಎಂದು ಸಲಹೆ ನೀಡಲಾಗಿದೆ.
ಭಾರತೀಯರಿಗೆ ಈ ವರ್ಷದ ಕೊನೆಯ ಗ್ರಹಣ ಕಣ್ತುಂಬಿಕೊಳ್ಳಲು ನಾಸಾ ಅವಕಾಶ ಕಲ್ಪಿಸಿದೆ. ನಾಸಾದ ಅಧಿಕೃತ ವೆಬ್ಸೈಟ್ ಹಾಗೂ ಟ್ವಿಟರ್ನಲ್ಲಿ ಗ್ರಹಣದ ನೇರ ಪ್ರಸಾರ ಇರಲಿದೆ. ಯುಟ್ಯೂಬ್ನಲ್ಲೂ ನಾಸಾ ಲೈವ್ ಸ್ಟ್ರೀಮಿಂಗ್ ಮಾಡಲಿದೆ.