ಬೆಂಗಳೂರು: ಸಾರಿಗೆ ನೌಕರರನ್ನು ಸಧ್ಯಕ್ಕೆ ಸರ್ಕಾರಿ ನೌಕರರನ್ನಾಗಿ ಮಾಡುವುದು ಸಾಧ್ಯವಿಲ್ಲ. ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಮರಳುವಂತೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಮನವೊಲಿಕೆ ಮೂಲಕ ಕೆಲಸಕ್ಕೆ ತರಲು ಯತ್ನಿಸುತ್ತೇವೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಸಚಿವ ಸವದಿ, ನಮ್ಮ ಹಣಕಾಸಿನ ಇತಿಮಿತಿಯೊಳಗೆ ಬೇಡಿಕೆ ಈಡೇರಿಸುವ ಯತ್ನ ಮಾಡುತ್ತೇವೆ. ಆದರೆ ಸಾರಿಗೆ ನೌಕರರ ಈ ಮುಷ್ಕರದ ಹಿಂದೆ ಕಾಣದ ಶಕ್ತಿಗಳ ಕೈವಾಡವಿದೆ. ಕೆಲವೆಡೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿ, ಆಸ್ತಿ-ಪಾಸ್ತಿ ಹಾನಿ ಮಾಡಲಾಗಿದೆ. ಇದು ದುರ್ದೈವದ ಸಂಗತಿ ಎಂದರು.
ಸಾರಿಗೆ ಸಿಬ್ಬಂದಿಗಳು ನಮ್ಮ ಕುಟುಂಬವಿದ್ದಂತೆ. ಅನಗತ್ಯವಾಗಿ ಅವರು ಮುಷ್ಕರ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಇಂದು ಅಧಿಕಾರಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತೇವೆ. ಆದರೆ ಅವರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ. ಸಂಜೆ ವೇಳೆಗೆ ಬಸ್ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.